ವಿಐಎಸ್‌ಎಲ್ ಪುನಶ್ಚೇತನಕ್ಕೆ ಬದ್ಧ ಎಂದ ಸಿಎಂ; ಅಧಿಕಾರಕ್ಕೆ ಬಂದರೆ ಮೈಸೂರು ಪೇಪರ್ ಮಿಲ್ಸ್ ಉಳಿಸುತ್ತೇವೆ ಎಂದ ಡಿಕೆಶಿ ಪ್ರತಿಜ್ಞೆ

ಭದ್ರಾವತಿಯಲ್ಲಿ ವಿಶ್ವೇಶ್ವರಯ್ಯ ಐರನ್ ಅ್ಯಡ್ ಸ್ಟೀಲ್ ಲಿಮಿಟೆಡ್ (ವಿಐಎಸ್‌ಎಲ್) ಪುನಶ್ಚೇತನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದು, ಈ ನಡುವೆ ಅಧಿಕಾರಕ್ಕೆ ಬಂದರೆ ವಿಐಎಸ್‌ಎಲ್ ಮತ್ತು ಮೈಸೂರು ಪೇಪರ್ ಮಿಲ್ಸ್ ಉಳಿಸುತ್ತೇನೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಬುಧವಾರ ಪ್ರತಿಜ್ಞೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಭದ್ರಾವತಿಯಲ್ಲಿ ವಿಶ್ವೇಶ್ವರಯ್ಯ ಐರನ್ ಅ್ಯಡ್ ಸ್ಟೀಲ್ ಲಿಮಿಟೆಡ್ (ವಿಐಎಸ್‌ಎಲ್) ಪುನಶ್ಚೇತನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದು, ಈ ನಡುವೆ ಅಧಿಕಾರಕ್ಕೆ ಬಂದರೆ ವಿಐಎಸ್‌ಎಲ್ ಮತ್ತು ಮೈಸೂರು ಪೇಪರ್ ಮಿಲ್ಸ್ ಉಳಿಸುತ್ತೇನೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಬುಧವಾರ ಪ್ರತಿಜ್ಞೆ ಮಾಡಿದ್ದಾರೆ.

ಶಿವಮೊಗ್ಗದ ಐಬಿಯಲ್ಲಿ ವಿಐಎಸ್ ಎಲ್ ಕಾರ್ಮಿಕ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸಭೆ ನಡೆಸಿದರು.

ಈ ವೇಳೆ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಆದೇಶ ನಿಲ್ಲಿಸುವತ್ತ ಕೆಲಸ ಮಾಡುತ್ತೇನೆ ಹಾಗೂ ಕಾರ್ಖಾನೆ ಪುನಶ್ಚೇತನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಖಾಸಗಿ ಹೂಡಿಕೆದಾರರೊಂದಿಗೆ ಸಭೆ ನಡೆಸುತ್ತೇನೆಂದು ಹೇಳಿದರು.

ವಿಐಎಸ್‌ಎಲ್‌ ಅತ್ಯಂತ ಮಹತ್ವದ ಕಾರ್ಖಾನೆ. ಜಾಗತೀ ಕರಣದ ಪರಿಣಾಮ ಅನೇಕ ಸಾರ್ವಜನಿಕ ಸಂಸ್ಥೆಗಳು ಮುಚ್ಚಿವೆ. ವಿಐಎಸ್‌ಎಲ್‌ ಕಾರ್ಖಾನೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪ್ರಯತ್ನದಿಂದ ಉಳಿದಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ತನ್ನ ಬಂಡವಾಳ ಹಿಂದೆಗೆತ ಯೋಜನೆ ಯಡಿ ಈ ಕಾರ್ಖಾನೆ ಮುಚ್ಚಲು ಮುಂದಾಗಿದೆ. ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ ಇದೆ. ಜಿಂದಾಲ್‌ ಸಂಸ್ಥೆ ಬೃಹತ್‌ ಪ್ರಮಾಣದಲ್ಲಿ ಬೆಳೆದಿರುವಾಗ ವಿಐಎಸ್‌ಎಲ್‌ ಅನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಮುಚ್ಚುವ ಪ್ರಕ್ರಿಯೆ ತಡೆಯಲು ಪ್ರಯತ್ನಿಸಲಾಗುವುದು. ಬಳಿಕ ಬೇರೆ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ವಿಐಎಸ್‌ಎಲ್‌ ಕಾರ್ಮಿಕರ ಮುಷ್ಕರ ಗಮನದಲ್ಲಿದೆ. ಕಾರ್ಮಿಕರ ನಿಯೋಗವನ್ನು ಭೇಟಿಯಾಗುವೆ. ಜಿಲ್ಲೆಯ ಜನಪ್ರತಿನಿಧಿ ಗಳು ಹಾಗೂ ಇತರರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಕಾರ್ಖಾನೆ ಉಳಿಸಿಕೊಳ್ಳುವ ವಿಷಯದಲ್ಲಿ ರಾಜಕಾರಣ ಸರಿಯಲ್ಲ, ಕಾರ್ಖಾನೆ ಮತ್ತೆ ಆರಂಭವಾಗಬೇಕು ಹಾಗೂ ಲಾಭದಲ್ಲಿ ಮುನ್ನಡೆಯಬೇಕು ಎಂಬುದು ತಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.

ಇದೇ ವೇಳೆ ಭದ್ರಾವತಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಐಎಸ್ಎಲ್ ಮತ್ತು ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಪುನಶ್ಚೇತನಗೊಳಿಸುತ್ತೇವೆಂದು ಪ್ರತಿಜ್ಞೆ ಮಾಡಿದ್ದಾರೆ.

ರೈತರು, ಕಾರ್ಮಿಕರು, ವ್ಯಾಪಾರ ವರ್ಗದವರನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ನಾನು ಈ ಹಿಂದೆ ಶಿವಮೊಗ್ಗಕ್ಕೆ ಬಂದಾಗ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಶಿವಮೊಗ್ಗಕ್ಕೆ ಎಷ್ಟು ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಕೇಳಿದ್ದೆ. ಮೈಸೂರು ಮಹಾರಾಜರು ಕೊಟ್ಟ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಹೋದಾಗ, ಸಿದ್ದರಾಮಯ್ಯ ಅವರ ಸರ್ಕಾರವಿತ್ತು. ಆಗ ಸಂಗಮೇಶ್ ಅವರು ಮಾಜಿ ಶಾಸಕರಾಗಿದ್ದರೂ ಈ ಕಾರ್ಖಾನೆಗೆ ಗಣಿ ಜಾಗ ಮಂಜೂರು ಮಾಡಿಸಿದ್ದರು. ಕೇಂದ್ರ ಸರ್ಕಾರ ಈ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ ಮತ್ತೆ ಆರಂಭಕ್ಕೆ ಆದ್ಯತೆ ನೀಡಲಿಲ್ಲ.

ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು 1 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಭರವಸೆ ನೀಡಿದ್ದರು. ನಂತರ ಕೇಂದ್ರ ಸಚಿವರು ಬಂದು 6 ಸಾವಿರ ಕೋಟಿ ಬಂಡವಾಳ ಹೂಡಿಕೆ ನೀಡುವುದಾಗಿ ಹೇಳಿದ್ದರು. ಇದ್ಯಾವುದನ್ನು ಮಾಡಲಿಲ್ಲ. ಶಿವಮೊಗ್ಗ ಸಂಸದರೂ ಸೇರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದಾರೆ. ಆದರೂ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಈ ಕಾರ್ಖಾನೆ ಉಳಿಸಲು ಪ್ರಯತ್ನಿಸುತ್ತಿಲ್ಲ.

ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿದೆ. ಈಗ ಈ ಕಾರ್ಖಾನೆ ಮಾರಾಟ ಮಾಡಲು ಮುಂದಾಗಿದ್ದು, ಖರೀದಿ ಮಾಡಲು ಯಾರೂ ಬಂದಿಲ್ಲ ಎಂದು ಈಗ ಮುಚ್ಚಲು ಮುಂದಾಗಿದ್ದಾರೆ ಎಂದು‌ ಆರೋಪಿಸಿದರು.

ಉಕ್ಕಿನ ಕಾರ್ಖಾನೆ ಹಾಗೂ ಕಾಗದ ಕಾರ್ಖಾನೆ ಎರಡು ಸರ್ಕಾರದ ಸ್ವಾಮ್ಯದಲ್ಲೇ ಮುಂದುವರಿಯಬೇಕು. ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಖಾಸಗಿಯವರಿಂದ ನಡೆಸಲಾಗುವ ಕಾರ್ಖಾನೆಯನ್ನು ಸರ್ಕಾರ ಯಾಕೆ ನಡೆಸಲು ಸಾಧ್ಯವಾಗುತ್ತಿಲ್ಲ? ಅಂದರೆ ನಿಮಗೆ ಆಡಳಿತ ನಡೆಸಲು ಆಗುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com