ಬೆಳಗಾವಿ: ಮಹದಾಯಿ ತಿರುವು ಯೋಜನೆಯಿಂದಾಗುವ ದುಷ್ಕರಿಣಾಮಗಳ ಕುರಿತು ಅಧ್ಯಯನ ನಡೆಸಲು ಗೋವಾ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಮಹದಾಯಿ ತಿರುವು ಯೋಜನೆಯಿಂದಾಗುವ ದುಷ್ಕರಿಣಾಮಗಳ ಕುರಿತು ರಾಷ್ಟ್ರೀಯ ಪರಿಸರವಾದಿಗಳಿಂದ ಅಧ್ಯಯನ ನಡೆಸಬೇಕು ಎಂದು ಗೋವಾದ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರನ್ನೊಳಗೊಂಡ ಸದನ ಸಮಿತಿಯು ಒತ್ತಾಯಿಸಿದೆ.
ಈ ಸಂಬಂಧ ಬುಧವಾರ ಗೋವಾದಲ್ಲಿ ನಡೆದ ಸದನ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪರಿಸರವಾದಿಗಳು ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಬೇಕು. ಈ ವರದಿಯನ್ನು ಆಧರಿಸಿ ಮಹದಾಯಿ ವಿವಾದ ಸಂಬಂಧ ಗೋವಾಗೆ ಬೆಂಬಲ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಸದನ ಸಮಿತಿ ಅಧ್ಯಕ್ಷ ಸುಭಾಷ್ ಶಿರೋಡ್ಕರ್ ಅವರು ಮಾತನಾಡಿ, ಸದನ ಸಮಿತಿಯು ಮುಂದಿನ 20 ದಿನಗಳಲ್ಲಿ ಕರ್ನಾಟಕವು ಕಾರ್ಯಗತಗೊಳಿಸಿದ ಯೋಜನೆಯ ದುಷ್ಪರಿಣಾಮಗಳ ಕುರಿತು ವರದಿ ಸಲ್ಲಿಸಲು ಸಲಹೆಗಾರರು ಮತ್ತು ತಜ್ಞರನ್ನು ನೇಮಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ಮಹಾದಾಯಿ ಹೋರಾಟವನ್ನು ಆಡಳಿತ ಮಟ್ಟದಲ್ಲಿ ನಡೆಸುತ್ತಿದೆ. ಮಹದಾಯಿ ಯೋಜನೆಯಿಂದಾಗುವ ಪರಿಣಾಮಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೂ ಮಾಹಿತಿ ನೀಡಿದ್ದೇನೆ. ಈ ಯೋಜನೆಯು ಯುನೆಸ್ಕೋ ಪಟ್ಟಿಯಲ್ಲಿರುವ ಪಶ್ಚಿಮ ಘಟ್ಟಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರು ವನ್ಯಜೀವಿ ಅಭಯಾರಣ್ಯಗಳನ್ನು ನಾಶಪಡಿಸುತ್ತದೆ ಎಂದು ಶಿರೋಡ್ಕರ್ ತಿಳಿಸಿದ್ದಾರೆ.
Advertisement