ಪ್ರತ್ಯೇಕವಾಗಿ ಬದುಕುವಷ್ಟು ಸಂಪನ್ಮೂಲ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಇಲ್ಲ: ಬಸವರಾಜ ಹೊರಟ್ಟಿ
ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು ಸ್ವಂತವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ. ರಾಜ್ಯ ಒಡೆಯುವ ಮಾತನ್ನು ಯಾರೂ ಆಡಬಾರದು ಎಂದು ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವ ಸಂಘಟನೆಗಳಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ.
Published: 10th February 2023 09:55 AM | Last Updated: 10th February 2023 03:09 PM | A+A A-

ಬಸವರಾಜ ಹೊರಟ್ಟಿ
ಕಲಬುರಗಿ: ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು ಸ್ವಂತವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ. ರಾಜ್ಯ ಒಡೆಯುವ ಮಾತನ್ನು ಯಾರೂ ಆಡಬಾರದು ಎಂದು ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವ ಸಂಘಟನೆಗಳಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಫಾರ್ಮಸಿ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಂದೆ-ತಾಯಿ, ಊರು, ಮನೆ ಮಠವನ್ನು ಗೌರವಿಸಬೇಕು. ತಂದೆ-ತಾಯಿ, ಊರು, ಮನೆ ಎಲ್ಲರಿಗೂ ದೇವರಿದ್ದಂತೆ. ನಾವಿಂದು ಏನಾದರೂ ಆಗಿದ್ದೇವೆಂದ ಎಂದರೆ ಅದಕ್ಕೆ ಅವರೇ ಕಾರಣ. ಅವರ ಹೆಸರಿಗೆ ಖ್ಯಾತಿ ತರುವಂತರ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆು. ನಾನು ಸಚಿವನಾಗಿದ್ದ ಹಲವು ಅವಧಿಯಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ, ವಿಶೇಷವಾಗಿ ಕಲಬುರಗಿ ಮತ್ತು ಮುಂಬೈ ಕರ್ನಾಟಕ ಪ್ರದೇಶಕ್ಕೆ ಮೊದಲ ಆದ್ಯತೆ ನೀಡಿದ್ದೆ. 371 ಜೆ ಕಲಂ ತಿದ್ದುಪಡಿಯನ್ನು ಪರಿಪೂರ್ಣ ರೀತಿಯಲ್ಲಿ ಜಾರಿಗೊಳಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಹಣಕಾಸು ವರ್ಷದಲ್ಲಿ ರೂ.5,000 ಕೋಟಿ ಮೀಸಲು- ಸಿಎಂ ಬೊಮ್ಮಾಯಿ
ಇದೇ ವೇಳೆ ಉತ್ತರಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಅವರು, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು ಸ್ವಂತವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ. ರಾಜ್ಯ ಒಡೆಯುವ ಮಾತನ್ನು ಆಡಬಾರದು ಬದಲಾಗಿ ಒಗ್ಗಟ್ಟಿನಿಂದ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಬಳಿಕ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯ ಹೆಸರನ್ನು ಕಲ್ಯಾಣ ಕರ್ನಾಟಕ ಎಜುಕೇಶನ್ ಸೊಸೈಟಿ ಎಂದು ಬದಲಾಯಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಮಾತನಾಡಿ, ಎಚ್ ಕೆಇ ಸೊಸೈಟಿ ಈ ವರ್ಷ ಉತ್ತಮ ಲಾಭ ಗಳಿಸಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಶುಲ್ಕ ಪಾವತಿಸಬೇಕು, ನೀವು ನೀಡುವ ದೇಣಿಗೆ ಹಣವನ್ನು ಸಮಾಜದ ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಾಣಕ್ಕೆ ಹಾಗೂ ಸಿಬ್ಬಂದಿಯ ವೇತನ ಪಾವತಿಗೆ ಬಳಸಲಾಗುವುದು. ವಿದ್ಯಾರ್ಥಿಗಳು ನೀಡುವ ಡೊನೇಷನ್ ಮತ್ತು ಶುಲ್ಕ ಎರಡೂ ಸಮಾಜಕ್ಕೆ ಸಹಕಾರಿಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಎಚ್‌ಕೆಇ ಸೊಸೈಟಿಯ ಉಪಾಧ್ಯಕ್ಷ ಡಾ.ಎಸ್.ಆರ್.ಹರವಾಲ್, ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ ಸಂಚಾಲಕರೂ ಆಗಿರುವ ಆಡಳಿತ ಮಂಡಳಿ ಸದಸ್ಯ ಸಾಯಿನಾಥ ಎನ್.ಪಾಟೀಲ್ ಉಪಸ್ಥಿತರಿದ್ದರು.