ಜೈನ್ ವಿವಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕುರಿತ ಸ್ಕಿಟ್ ನಲ್ಲಿ ಅವಮಾನ; 7 ವಿದ್ಯಾರ್ಥಿಗಳ ಬಂಧನ
ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಕುರಿತು ಪ್ರದರ್ಶಿಸಿದ ಕಿರುನಾಟಕ ವಿವಾದ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಜೈನ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
Published: 13th February 2023 01:16 PM | Last Updated: 13th February 2023 07:00 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಕುರಿತು ಪ್ರದರ್ಶಿಸಿದ ಕಿರುನಾಟಕ ವಿವಾದ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಜೈನ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಬಂಧಿತ ವಿದ್ಯಾರ್ಥಿಗಳು ಕಾಲೇಜಿನಲ್ಲಿ 5ನೇ ಸೆಮಿಸ್ಟರ್‌ನ ಬೇರೆ ಬೇರೆ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರೆಂದು ವರದಿಗಳು ತಿಳಿಸಿವೆ.
ದಕ್ಷಿಣ ವಿಭಾಗದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕಾಲೇಜಿನ ಪ್ರಾಂಶುಪಾಲರು, ಡೀನ್, ಕಾರ್ಯಕ್ರಮ ಆಯೋಜಕರು, ವಿದ್ಯಾರ್ಥಿಗಳು ಹಾಗೂ ಸ್ಕಿಟ್ ಬರಹಗಾರರ ಮೇಲೆ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ಸ್ಕಿಟ್ ನಲ್ಲಿ ಅಂಬೇಡ್ಕರ್, ದಲಿತರ ಬಗ್ಗೆ ಅಪಹಾಸ್ಯ: ಜೈನ್ ವಿವಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಜಯನಗರ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಎಸ್‌ಸಿ, ಎಸ್‌ಟಿ ಆ್ಯಕ್ಟ್ ಹಾಗೂ ಐಪಿಸಿ 153a, 295a, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಗಳ ಸ್ಕಿಟ್ ಪ್ರದರ್ಶನದಿಂದಾಗಿ ಕಾಲೇಜಿಗೆ ಮುಜುಗರ ಎದುರಾಗಿರುವ ಹಿನ್ನೆಲೆಯಲ್ಲಿ ಜೈನ್ ಕಾಲೇಜು ಆಡಳಿತ ಮಂಡಳಿ ಅಸಮಾಧಾನಗೊಂಡಿದ್ದು, ಈಗಾಗಲೇ ಬೇಷರತ್ ಕ್ಷಮೆಯಾಚಿಸಿದೆ. ಅಲ್ಲದೆ. ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ ಎಂದು ತಿಳಿದುಬಂದಿದೆ. ಇದೀಗ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.