ಭದ್ರಾವತಿ ವಿಐಎಸ್ಎಲ್ ಮುಚ್ಚುವುದು ಖಚಿತ: ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ
ಕಬ್ಬಿಣದ ಅದಿರಿನ ಅಲಭ್ಯತೆ, ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಹೆಚ್ಚಿನ ವೆಚ್ಚ ಮತ್ತು ಕಡಿಮೆ ಉತ್ಪಾದನೆಯಿಂದಾಗಿ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಐರನ್ ಆ್ಯಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್ಎಲ್)ನ್ನು ಮುಚ್ಚಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ.
Published: 14th February 2023 09:28 AM | Last Updated: 14th February 2023 08:01 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಕಬ್ಬಿಣದ ಅದಿರಿನ ಅಲಭ್ಯತೆ, ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಹೆಚ್ಚಿನ ವೆಚ್ಚ ಮತ್ತು ಕಡಿಮೆ ಉತ್ಪಾದನೆಯಿಂದಾಗಿ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಐರನ್ ಆ್ಯಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್ಎಲ್)ನ್ನು ಮುಚ್ಚಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ.
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ತನ್ನ ಹಲವು ಘಟಕಗಳನ್ನು ಮುಚ್ಚುತ್ತಿದೆಯೇ ಎಂಬ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಭದ್ರಾವತಿ ವಿಐಎಸ್ಎಲ್ ಮುಚ್ಚುವುದನ್ನು ಖಚಿತಪಡಿಸಿದರು.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ಭದ್ರಾವತಿಯಲ್ಲಿರುವ ವಿಐಎಸ್ಎಲ್'ನ್ನು ಮಾತ್ರ ಮುಚ್ಚುತ್ತಿದೆ ಎಂದು ಉತ್ತರಿಸಿದರು.
ಇದನ್ನೂ ಓದಿ: ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚದಂತೆ ಪ್ರಧಾನಿ ಮೋದಿಗೆ ಹೆಚ್.ಡಿ.ದೇವೇಗೌಡ ಮನವಿ
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇಂದು ರಾಜ್ಯಸಭೆಯಲ್ಲಿ ಸರ್ಕಾರ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ & ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಒಪ್ಪಿಕೊಂಡಿದೆ. ಕಾರ್ಖಾನೆಗೆ ಕಬ್ಬಿಣದ ಅದಿರಿನ ಮೂಲ ಇಲ್ಲಾ ಎಂಬ ಕಾರಣ ನೀಡಿ ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿದ್ದರೂ SAILಗೆ ಗಣಿ ಇಲ್ಲಾ ಎಂಬುದು ಆಶ್ಚರ್ಯಕರ ಎಂದು ಹೇಳಿದ್ದಾರೆ.
ಭದ್ರಾವತಿಯು ಕಬ್ಬಿಣ ಅದಿರು ಸಂಪತ್ಭರಿತ ಬಳ್ಳಾರಿಯಿಂದ ಕೇವಲ 250 ಕಿಮೀ ನಷ್ಟು ಅಂತರದಲ್ಲಿದ್ದರೂ ಈ ಕಾರಣ ನೀಡಲಾಗಿದೆ. ಗಣಿ ಪರವಾನಗಿಯನ್ನು ವಿಐಎಸ್ಎಲ್'ಗೆ ಅಕ್ಟೋಬರ್ 2011ರಲ್ಲಿಯೇ ನೀಡಲಾಗಿದ್ದರೂ, ಈ ಮೋದಿ ಸರ್ಕಾರ ಈವರೆಗೂ ಏನನ್ನೂ ಮಾಡಿಲ್ಲಾ ಎಂದು ತಿಳಿಸಿದ್ದಾರೆ.