ಬಜೆಟ್‌ನಲ್ಲಿ ಹಣ ಮೀಸಲಿಡದೆ ಇಂದಿರಾ ಕ್ಯಾಂಟೀನ್'ಗಳ ಬಂದ್ ಮಾಡಲು ರಾಜ್ಯ ಸರ್ಕಾರ ಮುಂದು: ಕಾಂಗ್ರೆಸ್ ಆರೋಪ
ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಮೀಸಲಿಡದೆ, ಇಂದಿರಾ ಕ್ಯಾಂಟೀನ್ ಗಳ ಬಂದ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Published: 22nd February 2023 10:07 AM | Last Updated: 22nd February 2023 02:04 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಮೀಸಲಿಡದೆ, ಇಂದಿರಾ ಕ್ಯಾಂಟೀನ್ ಗಳ ಬಂದ್ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಉದ್ದೇಶಪೂರ್ವಕವಾಗಿಯೇ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಲಸೆ ಕಾರ್ಮಿಕರು, ಗ್ರೂಪ್ ಡಿ ನೌಕರರು ಮತ್ತು ಬಡವರಿಗೆ ಸಾರ್ವಜನಿಕ ಕ್ಯಾಂಟೀನ್‌ನಲ್ಲಿ ಮೂರು ಹೊತ್ತಿನ ಊಟ ನೀಡಲು ವರ್ಷಕ್ಕೆ 100 ಕೋಟಿ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮಾಜಿ ವಿರೋಧ ಪಕ್ಷದ ನಾಯಕ ಎನ್ ಶಿವರಾಜ್ ಮಾತನಾಡಿ, ಯಾವುದೇ ಮೊಬೈಲ್ ಕ್ಯಾಂಟೀನ್‌ಗಳಿಲ್ಲ, ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್'ನ್ನು ಸರ್ಕಾರ ಬಂದ್ ಮಾಡಲಿದೆ. ಆರ್‌ಆರ್‌ನಗರದಲ್ಲಿ ಮೊಬೈಲ್ ಕ್ಯಾಂಟೀನ್‌ಗಳಷ್ಟೇ ಅಲ್ಲ, ಸಾಮಾನ್ಯ ಕ್ಯಾಂಟೀನ್‌ಗಳನ್ನೂ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ನೀಡಿರುವ ಮಾಹಿತಿಗಳ ಪ್ರಕಾರ, ಒಟ್ಟಾರೆಯಾಗಿ ನಗರದಲ್ಲಿ 174 ಇಂದಿರಾ ಕ್ಯಾಂಟೀನ್‌ಗಳಿದ್ದು, 15 ಮೊಬೈಲ್ ಕ್ಯಾಂಟೀನ್‌ಗಳಿದ್ದವು. ಆದರೆ, ಇದೀಗ ಮೊಬೈಲ್ ಕ್ಯಾಂಟೀನ್‌ಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುತ್ತಿದೆ: ಡಿಕೆ ಶಿವಕುಮಾರ್
ಬಡಲವರು ಮತ್ತು ದೀನ ದಲಿತರಿಗೆ ಆಹಾರ ನೀಡಲು ಸರ್ಕಾರ ಯಾವುದೇ ರೀತಿಯ ಹಣವನ್ನು ಮೀಸಲಿಡುತ್ತಿಲ್ಲ. ಇದೀಗ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಸಾರ್ವಜನಿಕ ಕ್ಯಾಂಟೀನ್‌ಗಳನ್ನು ಬಡವರಿಗೆ ಸಮರ್ಪಿಸಲು ವಾರ್ಷಿಕ 100 ಕೋಟಿ ರೂ ಮೀಸಲಿಡುತ್ತೇವೆ. ಕೋವಿಡ್ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಸುಮಾರು ಎರಡು ಲಕ್ಷ ಬಡವರಿಗೆ ನೀಡಲಾಗಿತ್ತು ಎಂಬುದನ್ನು ಸ್ಮರಿಸಬೇಕಿದೆ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಇಂದಿರಾ ಕ್ಯಾಂಟೀನ್ ಗಳನ್ನು ಬಂದ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ನಡೆಸಲು ಸರ್ಕಾರದಿಂದ ಪ್ರತ್ಯೇಕವಾಗಿ ಹಣ ಮಂಜೂರಾಗಿಲ್ಲ, ಪಾಲಿಕೆ ಇವುಗಳ ನಿರ್ವಹಣೆ ಮಾಡಬೇಕಿದೆ, ಜನಸಂದಣಿ ಕಡಿಮೆ ಇದ್ದ ಕಡೆಗಳಲ್ಲಿ ಮಾತ್ರ ಮೊಬೈಲ್ ಕ್ಯಾಂಟೀನ್‌ಗಳನ್ನು ಬಂದ್ ಮಾಡಲಾಗಿದೆ ಎಂದರು.