
ಸಿಎಂ ಬೊಮ್ಮಾಯಿ,ಅರವಿಂದ ಲಿಂಬಾವಳಿ ಸಾಂದರ್ಭಿಕ ಚಿತ್ರ
ಬೆಂಗಳೂರು: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಪ್ರದೀಪ್ (47) ಬೆಂಗಳೂರು ದಕ್ಷಿಣ ತಾಲೂಕ್ ನೆಟ್ಟಿಗೆರೆ ಬಳಿ ಭಾನುವಾರ ಸಂಜೆ ತಲೆಗೆ ಗುಂಡು ಹಾರಿಸಿಕೊಂಡು ಕಾರಿನಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರದೀಪ್ ಪತ್ನಿ ನೀಡಿದ ದೂರಿನ ಅನ್ವಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಾನೂನು ಪ್ರಕಾರವೇ ತನಿಖೆ ನಡೆಯುವುದರಿಂದ ಸರ್ಕಾರ ಮಧ್ಯಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ದೇಶದ ಕಾನೂನು ಎಲ್ಲರಿಗೂ ಒಂದೇ. ನಿಷ್ಪಕ್ಷಪಾತದ ತನಿಖೆ ನಡೆಯಲಿದ್ದು, ಇದರಲ್ಲಿ ಯಾರೇ ಇದ್ದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಈ ನಡುವೆ ಇದೇ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರ ಎಂತೆಂಥ ಸಚಿವರುಗಳಿಗೆ ಬಿ ರಿಪೋರ್ಟ್ ಬರೆದಿದ್ದು, ಅರವಿಂದ ಲಿಂಬಾವಳಿ ಪ್ರಕರಣದಲ್ಲೂ ಅದನ್ನೇ ಬರೆಯುತ್ತಾರೆ ಎಂದರು.
ಇದನ್ನೂ ಓದಿ: ಪ್ರದೀಪ್ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲು
ಎಚ್‌ಎಸ್‌ಆರ್ ಲೇಔಟ್ ಬಳಿ ರೆಸಾರ್ಟ್ ಮಾಡಲು ಗೋಪಿ, ಸೋಮಯ್ಯ ಮತ್ತು ಮತ್ತಿತರೊಂದಿಗೆ ಪ್ರದೀಪ್ ಸುಮಾರು 1.5 ಕೋಟಿ ರೂ. ಹೂಡಿಕೆ ಮಾಡಿದ್ದು, ತದನಂತರ ಆತನ ಪಾಲು ನೀಡಿಲ್ಲ. ಇದರಿಂದ ತನಗೆ ನ್ಯಾಯ ಒದಗಿಸಬೇಕೆಂದು ಆತ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಲಿಂಬಾವಳಿ ಅವರ ನಡುವೆ ರಾಜಿ ಸಂಧಾನಕ್ಕೆ ಯತ್ನಿಸಿದ್ದು, ಪ್ರದೀಪ್ ಗೆ ಬಾಕಿ ಪಾವತಿಸಲು ಒಂದು ತಿಂಗಳ ಹಿಂದೆ ಒಪ್ಪಂದವಾಗಿತ್ತು. ಆದರೆ ನಂತರ ಎಲ್ಲಾ ಹಣವನ್ನು ಸ್ವೀಕರಿಸಲಿಲ್ಲ ಎಂದು ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಹೊಸ ವರ್ಷಾಚರಣೆಗಾಗಿ ಶನಿವಾರ ರಾತ್ರಿ ತನ್ನ ಕುಟುಂಬಸ್ಥರೊಂದಿಗೆ ನೆಟ್ಟಿಗೆರೆ ರೆಸಾರ್ಟ್ ಗೆ ಹೋಗಿದ್ದ ಪ್ರದೀಪ್, ಭಾನುವಾರ ಬೆಳಗ್ಗೆ ರೆಸಾರ್ಟ್ ನಿಂದ ಹೊರಟು ಶಿರಾಕ್ಕೆ ಹೋಗಬೇಕಾದ ಅಗತ್ಯವಿದೆ ಎಂದು ಹೇಳಿದ್ದರು. ಆದರೆ, ಅವರು ಶಿರಾಕ್ಕೆ ಹೋಗುವ ಬದಲು ರೆಸಾರ್ಟ್ ಗೆ ಮರಳಿ ಡೆತ್ ನೋಟ್ ಬರೆದಿಟ್ಟು, ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.