ಮೈಸೂರು: ಸಿಎಫ್'ಟಿಆರ್'ಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಿದ ಆತಂಕ

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆವರಣದಲ್ಲಿ ಮಂಗಳವಾರ ರಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಸ್ಥಳದಲ್ಲಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು.
ಸ್ಥಳದಲ್ಲಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು.

ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆವರಣದಲ್ಲಿ ಮಂಗಳವಾರ ರಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ನಗರದ ಒಂಟಿಕೊಪ್ಪಲು ರಸ್ತೆಯಲ್ಲಿರುವ ಸಿ.ಎಫ್.ಟಿ.ಆರ್.ಐ ಆವರಣದಲ್ಲಿರುವ ಕಾಡು ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ.

ಕೆ.ಆರ್.ರಸ್ತೆಯಿಂದ ಹುಣಸೂರು ರಸ್ತೆ ವರೆಗೂ ಹರಡಿಕೊಂಡಿರುವ ಸಿ.ಎಫ್.ಟಿ.ಆರ್.ಐ ಆವರಣದಲ್ಲಿ ಸಾಕಷ್ಟು ಹಸಿರು ವಲಯ ಇದೆ. ಇಲ್ಲಿ ಸಿ.ಎಫ.ಟಿ.ಆರ್.ಐ ಶಾಲೆಯೂ ಇದ್ದು ಈ ಶಾಲೆಯ ಬಳಿ ಎರಡು ಚಿರತೆಗಳು ಸಂಚರಿಸುತ್ತಿದ್ದನ್ನು ಕರ್ತವ್ಯದಲ್ಲಿದ್ದ  ಭದ್ರತಾ ಸಿಬ್ಬಂದಿ ನೋಡಿದ್ದಾರೆ.

ಕೂಡಲೇ ಈ ಕರ್ತವ್ಯ ಸಿಬ್ನಂದಿ ಸಿ.ಎಫ್.ಟಿ.ಆರ್.ಐ ನ  ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳಿಗೂ ವಿಷಯ ಮುಟ್ಟಿಸಲಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣ ಆರಂಭಿಸಿದ್ದು, ಬೋನುಗಳನ್ನು ಹಾಕಿದ್ದಾರೆ.

ಶಾಲಾ ಕಟ್ಟಡದ ಬಳಿ ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ಪ್ರಭಾಕರ್ ಅವರಿಗೆ ಚಿರತೆಗಳು ಕಾಣಿಸಿಕೊಂಡಿವೆ. ಚೆಲುವಾಂಬ ಉದ್ಯಾನವನದ ಎದುರಿನ ಶಾಲೆಯ ಬಳಿ ರಾತ್ರಿ ಕರ್ತವ್ಯ ನಿರತರಾಗಿದ್ದಾಗ ಮಧ್ಯರಾತ್ರಿ 1.30ರ ವೇಳೆಗೆ ಎರಡು ಚಿರತೆಗಳು ಪ್ರವೇಶ ದ್ವಾರದ ಬಳಿ ಚಲಿಸುತ್ತಿರುವುದನ್ನು ಗಮನಿಸಿದೆ ಎಂದು ಪ್ರಭಾಕರ್ ಅವರು ಹೇಳಿದ್ದಾರೆ.

"ಆರಂಭದಲ್ಲಿ, ಅವರು ಚಿರತೆಗಳು ಎಂದು ನಾನು ನಂಬಿರಲಿಲ್ಲ. ನನ್ನಿಂದ ಕೇವಲ 50 ಮೀಟರ್ ದೂರದಲ್ಲಿ ಚಿರತೆಗಳು ಚಲಿಸುತ್ತಿದ್ದವು. ನಾನು ಕೂಡಲೇ ಗೇಟ್‌ಗಳನ್ನು ಮುಚ್ಚಿ ಮತ್ತೊಂದು ಪ್ರವೇಶ ದ್ವಾರದ ಕಡೆಗೆ ಓಡಿ ನನ್ನ ಸಹೋದ್ಯೋಗಿಗೆ ತಿಳಿಸಿದೆ. ನಂತರ ನಾವು ನಮ್ಮ ಮೇಲ್ವಿಚಾರಕರಿಗೆ ಬೆಳಿಗ್ಗೆ 6 ಗಂಟೆಗೆ ಮಾಹಿತಿ ನೀಡಿದೆವು. ನಾನು ಚಿರತೆಗಳನ್ನು ಮೃಗಾಲಯದಲ್ಲಿ ಮಾತ್ರ ನೋಡಿದ್ದೆ, ಆದರೆ ತೆರೆದ ಸ್ಥಳದಲ್ಲಿ ನೋಡಿದ್ದು ಇದೇ ಮೊದಲು. ಚಿರತೆಗಳನ್ನು ಪ್ರತ್ಯಕ್ಷವಾಗಿ ಮೊದಲ ಬಾರಿಗೆ ನೋಡಿದೆ ಎಂದು ತಿಳಿಸಿದ್ದಾರೆ.

ಸಿಎಫ್‌ಟಿಆರ್‌ಐ ಪ್ರಭಾರಿ ನಿರ್ದೇಶಕ ಸತೀಶ್ ಮಾತನಾಡಿ, ಕ್ಯಾಂಪಸ್‌ನಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದೆ. "ನಾವು ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಮಕ್ಕಳಿಗೆ ರಜೆ ಘೋಷಿಸುವಂತೆ ಶಾಲಾ ಮುಖ್ಯಸ್ಥರಿಗೂ ಸೂಚಿಸಿದ್ದೇವೆ. ಈ ಸಂಸ್ಥೆಯು ಮೊದಲು ಅರಮನೆಯಾಗಿದ್ದರಿಂದ ಆವರಣದಲ್ಲಿ ವಿಶಾಲವಾದ ಅರಣ್ಯ ಪ್ರದೇಶವಿದೆ. ಘಟನೆಯ ನಂತರ, ಕ್ಯಾಂಪಸ್‌ನಲ್ಲಿ ವನ್ಯಜೀವಿಗಳ ಪತ್ತೆಹಚ್ಚಲು ರಾತ್ರಿ ದೃಷ್ಟಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದೇವೆಂದು ಹೇಳಿದ್ದಾರೆ.

ಏತನ್ಮಧ್ಯೆ, ಎಸಿಎಫ್ ಲಕ್ಷ್ಮೀಕಾಂತ್ ಮತ್ತು ಆರ್‌ಎಫ್‌ಒ ಸುರೇಂದ್ರ ನೇತೃತ್ವದ ಅರಣ್ಯ ತಂಡ ಕ್ಯಾಂಪಸ್‌ನೊಳಗಿನ 150 ಎಕರೆ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಇದೇ ಪ್ರದೇಶದಲ್ಲಿ ಎಲ್ಲಿಯೂ ಚಿರತೆಗಳು ಬೀಡುಬಿಟ್ಟಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಭಾರಿ ಡಿಸಿಎಫ್ (ವನ್ಯಜೀವಿ) ಡಿ ಮಹೇಶ್ ಕುಮಾರ್ ಅವರು ಮಾತನಾಡಿ, ನಮಗೆ ದೊರತಿರುವ ಮಾಹಿತಿಗಳ ಆಧಾರದ ಮೇಲೆ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸವಲಾಗಿದೆ. ಈ ವರೆಗೂ ಚಿರತೆಗಳ ಯಾವುದೇ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ ಜನರು ಆತಂಕಕ್ಕೊಳಗಾಗಬಾರದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com