ಮೈಸೂರು: 'ಸ್ಯಾಂಟ್ರೋ' ರವಿಯನ್ನು ಕೂಡಲೇ ಬಂಧಿಸಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿರುವ ಬೆನ್ನಲ್ಲೇ, ಮೈಸೂರಿನ 6ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸ್ಯಾಂಟ್ರೋ ರವಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ಗುರುವಾರ ನಡೆಯಿತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಲಾಗಿದೆ.
ಬಿಜೆಪಿ ಸಚಿವರು ಮತ್ತು ಮುಖಂಡರೊಂದಿಗೆ ನಂಟು ಹೊಂದಿರುವ ಆರೋಪ ಹಾಗೂ ಅತ್ಯಾಚಾರ ಪ್ರಕರಣವನ್ನು ಸ್ಯಾಂಟ್ರೋ ರವಿ ಎದುರಿಸುತ್ತಿದ್ದು, ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಎಂದೂ ಕೂಡ ಹೇಳಲಾಗಿದೆ.
ಸ್ಯಾಂಟ್ರೊ ರವಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಸರ್ಕಾರದ ಕೆಲವು ಸಚಿವರೊಂದಿಗೆ ಸಂಪರ್ಕ ಹೊಂದಿ ಹಲವರು ಅಕ್ರಮ ಚಟುವಟಕೆಯಲ್ಲಿ ಭಾಗಿಯಾಗಿರುವ ಸುದ್ದಿ ವ್ಯಾಪಕವಾಗಿ ಹರಡಿರುವ ಹಿನ್ನೆಲಯಲ್ಲಿ ಆತಂಕಕ್ಕೆ ಒಳಗಾಗಿರುವ ಆರೋಪಿ ಸ್ಯಾಂಟ್ರೊ ರವಿ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ಶರಣಾಗಲಿದ್ದಾನೆ ಎಂಬ ವದಂತಿ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪತ್ರಕರ್ತರು ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಏತನ್ಮಧ್ಯೆ, ರಾಮನಗರ ಬಳಿ ಪೊಲೀಸರು ಆತನ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರವಿ ನಾಪತ್ತೆಯಾದ ದಿನದಿಂದ ತಲೆಮರೆಸಿಕೊಂಡಿದ್ದ ಚಾಲಕನನ್ನು ವಿಶೇಷ ತಂಡ ಬಂಧಿಸಿದೆ. ರಾಮನಗರದ ರೆಸಾರ್ಟ್‌ನಲ್ಲಿ ಆತನನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Advertisement