ಟೆಕ್ಕಿಗಳ 'ವರ್ಕ್ ಫ್ರಮ್ ಹೋಮ್' ಆಯ್ಕೆಯಿಂದ ಬಿಎಂಟಿಸಿ-ಕೆಎಸ್'ಆರ್'ಟಿಸಿ ಇಕ್ಕಟ್ಟಿಗೆ!

ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ಆಯ್ಕೆಯು ಸರ್ಕಾರಿ ಸಾರಿಗೆ ಸಂಸ್ಥೆಗಳಾಗಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ಆಯ್ಕೆಯು ಸರ್ಕಾರಿ ಸಾರಿಗೆ ಸಂಸ್ಥೆಗಳಾಗಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೋವಿಡ್ ಪೂರ್ವದ ಸಮಯದಲ್ಲಿ ಟೆಕ್ಕಿಗಳು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದ ಹವಾನಿಯಂತ್ರಿತ ಬಸ್‌ಗಳನ್ನು ನೆರೆಯ ಜಿಲ್ಲೆಗಳಿಗೆ ಓಡಿಸಲು ಬಿಎಂಟಿಸಿ ನಿರ್ಧರಿಸಿದ್ದು, ಬಿಎಂಟಿಸಿಯ ಈ ನಿರ್ಧಾರಕ್ಕೆ ಕೆಎಸ್ಆರ್'ಟಿಸಿ ಅಸಮಾಧಾನಗೊಂಡಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಬಿಎಂಟಿಸಿ ಸುಮಾರು 7,000 ಬಸ್ ಗಳ ನಿರ್ವಹಣೆ ಮಾಡುತ್ತಿದ್ದು, ಅವುಗಳಲ್ಲಿ 800ಕ್ಕೂ ಹೆಚ್ಚು ಬಸ್ ಗಳು ಹವಾನಿಯಂತ್ರಿತ ಬಸ್ ಗಳಿವೆ. ಹೆಚ್ಚಿನ ಬಸ್ ಗಳು ವೋಲ್ವೇಗಳಾಗಿವೆ. ಈ ಎಸಿ ಬಸ್‌ಗಳು ಈ ಹಿಂದೆ ಮುಖ್ಯವಾಗಿ ಟೆಕ್ ಹಬ್‌ಗಳಾದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚರಿಸುತ್ತಿದ್ದವು. ಆದರೆ, ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ಹೆಚ್ಚಿನ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಿದೆ. ಹೀಗಾಗಿ ಬಹುತೇಕ ಸಿಬ್ಬಂದಿಗಳು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಕಚೇರಿಗೆ ಹೋಗಬೇಕಾಗುತ್ತಿದೆ. ಈ ಹಿಂದೆ ಕಂಪನಿಗಳು ಉದ್ಯೋಗಿಗಳ ಕರೆತರಲು ಬಿಎಂಟಿಸಿ ಜೊತೆಗೆ ಒಪ್ಪಂದಗಳ ಮಾಡಿಕೊಳ್ಳುತ್ತಿತ್ತು. ಇದೀಗ ಆ ಒಪ್ಪಂದಗಳು ನಿಲ್ಲಿಸಿವೆ ಎಂದು ತಿಳಿದುಬಂದಿದೆ.

ಇದರ ಪರಿಣಾಮ ಎಸಿ ಬಸ್ ಗಳಿಂದ ಬರುತ್ತಿದ್ದ ಆದಾಯ ಅತ್ಯಂತ ಕಡಮೆಯಾಗಿದೆ. ಆದಾಯ ಗಳಿಸಲು ಈ ಹಿಂದೆ ಎಸಿ ಬಸ್ ಗಳ ದರವನ್ನು ಕಡಿಮೆ ಮಾಡಿತ್ತು, ಆದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಹೀಗಾಗಿ ಬಿಎಂಟಿಸಿಯು ಈ ಎಸಿ ಬಸ್ ಗಳನ್ನು ಬೆಂಗಳೂರಿನಿಂದ ಕೋಲಾರ, ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಚರಿಸುವ ಕುರಿತು ಚಿಂತನೆ ನಡೆಸಿದೆ.

ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ ಅವರು ಅನುಮತಿ ಕೋರಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಗೂ ಮುನ್ನ ನಗರದ ವಿವಿಧ ಭಾಗಗಳಿಂದ ಈ ಕಂಪನಿಗಳಿಗೆ ಮಾಸಿಕ ರೂ 6,000 ಶುಲ್ಕದಲ್ಲಿ ಎಸಿ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಟೆಕ್ಕಿಗಳ ವರ್ಕ್ ಫ್ರಮ್ ಹೋಮ್ ಆಯ್ಕೆಯಷ್ಟೇ ಅಲ್ಲದೆ, ಮೆಟ್ರೋ, ಕ್ಯಾಬ್ ಸೇವೆಗಳೂ ಕೂಡ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಬಿಎಂಟಿಸಿ ಎಸಿ ಅಲ್ಲದ ಸಾಮಾನ್ಯ ಬಸ್ ಗಳನ್ನು ಚಿಕ್ಕಬಳ್ಳಾಪುರದವರೆಗೂ ಓಡಿಸಲು ಅವಕಾಶ ನೀಡಿತ್ತು. ಆದರೆ, ಇದನ್ನು ಕೆಎಸ್‌ಆರ್‌ಟಿಸಿ ಸ್ವಾಗತಿಸಲಿಲ್ಲ.

ಕೆಎಸ್‌ಆರ್‌ಟಿಸಿ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳನ್ನು ಓಡಿಸುವುದು ಸರಿಯಲ್ಲ. ಎರಡೂ ಸಂಸ್ಥೆಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳ ನಡುವೆ ಸ್ಪರ್ಧೆಗಳು ಹೇಗೆ ಸಾಧ್ಯ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com