ಬೆಂಗಳೂರಿನಲ್ಲಿ ಅದ್ದೂರಿ ಗಣರಾಜ್ಯೋತ್ಸವ ದಿನಾಚರಣೆಗೆ ಸಕಲ ಸಿದ್ಧತೆ: ತುಷಾರ್ ಗಿರಿನಾಥ್
ಈ ಬಾರಿ ಅದ್ದೂರಿಯಾಗಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದ್ದು, ರಾಜ್ಯಮಟ್ಟದ ಸಮಾರಂಭಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
Published: 24th January 2023 11:40 PM | Last Updated: 25th January 2023 05:56 PM | A+A A-

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿನ ಸಭೆ
ಬೆಂಗಳೂರು: ಈ ಬಾರಿ ಅದ್ದೂರಿಯಾಗಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದ್ದು, ರಾಜ್ಯಮಟ್ಟದ ಸಮಾರಂಭಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 26 ರಂದು ಬೆಳಗ್ಗೆ 8-58ಕ್ಕೆ ಮುನ್ನ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣ ನಂತರ ತೆರೆದ ಜೀಪ್ ನಲ್ಲಿ ಪರೇಡ್ ವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.
ಪಥ ಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್ ಸಿಸಿ, ಸೇವಾದಳ, ಕೇರಳ ಮಹಿಳಾ ಪೋಲಿಸ್ ತಂಡ, ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡ ಕವಾಯಿತು ಮತ್ತು ಬ್ಯಾಂಡ್ ನ ಒಟ್ಟು 38 ತುಕಡಿಗಳಲ್ಲಿ ಸುಮಾರು 1,520 ಮಂದಿ ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ: ಗಣ ರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ 'ನಾರಿ ಶಕ್ತಿ': ವಾರದಲ್ಲೇ ತಯಾರಾಯ್ತು ಸ್ತಬ್ಧಚಿತ್ರ
ಸುನೀತ ಅವರ ತಂಡದಿಂದ ನಾಡಗೀತೆ, ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಉತ್ತರ ಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ 750 ಮಕ್ಕಳು ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ನೃತ್ಯ ಪ್ರದರ್ಶನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಅತಿಗಣ್ಯ, ಗಣ್ಯರು ಮತ್ತಿತರ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್ ಆರ್ ಪಿ ಮತ್ತು ಸಿಎಆರ್ ತುಕಡಿ, 3 ಅಗ್ನಿಶಾಮಕ ವಾಹನಗಳು, 2 ಆಂಬ್ಯುಲೆನ್ಸ್ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸೂಕ್ತ ನಿಗಾ ವಹಿಸಲು ಆಯಾಕಟ್ಟಿನ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.