ಪಿಎಸ್‌ಐ ನೇಮಕಾತಿ ಹಗರಣ: ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ನ್ಯಾಯಾಲಯಕ್ಕೆ ಶರಣು

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ಸೋಮವಾರ ಕಲಬುರಗಿಯ ನ್ಯಾಯಾಲಯಕ್ಕೆ ಶರಣಾದರು. ಇತ್ತೀಚಿಗೆ ಈತನ  ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
ಪ್ರಮುಖ ಆರೋಪಿ ಆರ್ ಡಿ ಪಾಟೀಲ್
ಪ್ರಮುಖ ಆರೋಪಿ ಆರ್ ಡಿ ಪಾಟೀಲ್

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ಸೋಮವಾರ ಕಲಬುರಗಿಯ ನ್ಯಾಯಾಲಯಕ್ಕೆ ಶರಣಾದರು. ಇತ್ತೀಚಿಗೆ ಈತನ  ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.

ಸೋಮವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಬಂದ ಆರ್ ಡಿ ಪಾಟೀಲ್  ಕಲಬುರಗಿಯ 5ನೇ ಜಿಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿ ಶರಣಾದರು. ಮ್ಯಾಜಿಸ್ಟ್ರೇಟ್ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಒಂದು ಅಥವಾ ಎರಡು ದಿನಗಳಲ್ಲಿ ಅವರನ್ನು ಪೊಲೀಸ್ ಕಸ್ಟಡಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

ಗುರುವಾರ ಇಡಿ ದಾಳಿ ನಂತರ  ಬಂಧಿಸಲು ಕಲಬುರಗಿಯ ಮನಗೆ ತೆರಳಿದ್ದ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ತಪ್ಪಿಸಿಕೊಳ್ಳುವಲ್ಲಿ   ಪಾಟೀಲ್ ಯಶಸ್ವಿಯಾಗಿದ್ದ. ಈ ಸಂಬಂಧ ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕ ನೋಟಿಸ್ ಜಾರಿಗೊಳಿಸಿದ್ದರು.

ಅಜ್ಞಾತ ಪ್ರದೇಶವೊಂದರಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಪಾಟೀಲ್, ತಾನು ತಲೆಮರೆಸಿಕೊಂಡಿಲ್ಲ, ಕಾನೂನಿನ ಬಗ್ಗೆ ಗೌರವವಿದೆ. ಜನರು ಆಶೀರ್ವದಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದ. 

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಏಪ್ರಿಲ್‌ನಲ್ಲಿ  ಪಾಟೀಲ್ ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಆದರೆ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com