ಪದ್ಮಭೂಷಣ ಪ್ರಶಸ್ತಿ ವಿಚಾರ ಅಚ್ಚರಿ ಮೂಡಿಸಿತ್ತು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ
ಪ್ರಶಸ್ತಿ ಬಂದಿರುವುದು ಅಚ್ಚರಿ ಮೂಡಿಸಿತ್ತು. ಪ್ರಶಸ್ತಿಗೆ ನನ್ನನ್ನು ಯಾರು ನಾಮಿನೇಟ್ ಮಾಡಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಾನು ಮಾಡುವ ಸಣ್ಣ ಕೆಲಸಕ್ಕಾಗಿ ಜನರು ನನ್ನನ್ನು ಮೂರನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಗುರುತಿಸಿರುವುದು ದೊಡ್ಡ ಗೌರವ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಹೇಳಿದ್ದಾರೆ.
Published: 27th January 2023 08:44 AM | Last Updated: 27th January 2023 09:38 AM | A+A A-

ಇನೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ
ಬೆಂಗಳೂರು: ಪ್ರಶಸ್ತಿ ಬಂದಿರುವುದು ಅಚ್ಚರಿ ಮೂಡಿಸಿತ್ತು. ಪ್ರಶಸ್ತಿಗೆ ನನ್ನನ್ನು ಯಾರು ನಾಮಿನೇಟ್ ಮಾಡಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಾನು ಮಾಡುವ ಸಣ್ಣ ಕೆಲಸಕ್ಕಾಗಿ ಜನರು ನನ್ನನ್ನು ಮೂರನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಗುರುತಿಸಿರುವುದು ದೊಡ್ಡ ಗೌರವ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಹೇಳಿದ್ದಾರೆ.
ಪ್ರಶಸ್ತಿ ಲಭಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, 17 ವರ್ಷಗಳ ಹಿಂದೆ ಪದ್ಮಶ್ರೀ ಪಡೆದಿದ್ದೆ ಈಗ ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದು ಮತ್ತಷ್ಟು ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ.
ಹಾವೇರಿಯಲ್ಲಿ ಜನಿಸಿದ ಸುಧಾ ಮೂರ್ತಿ ಅವರು ಶಿಕ್ಷಣ ತಜ್ಞೆಯಾಗಿ, ಲೋಕೋಪಕಾರಿಯಾಗಿ, ಇನ್ಫೋಸಿಸ್ ಫೌಂಡೇಶನ್‌ನ ಸಂಸ್ಥಾಪಕಿಯಾಗಿ ಮತ್ತು ಅಧ್ಯಕ್ಷೆಯಾಗಿ ಚಿರಪರಿಚಿತರಾಗಿದ್ದಾರೆ. ಸುಧಾಮೂರ್ತಿಯವರು ಖ್ಯಾತ ಲೇಖಕಿಯೂ ಆಗಿದ್ದಾರೆ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಅವುಗಳನ್ನು ಟಿವಿ ಮತ್ತು ಸಿನೆಮಾಕ್ಕೆ ಅಳವಡಿಸಲಾಗಿದೆ.
ಇನ್ಫೋಸಿಸ್ ಫೌಂಡೇಶನ್ ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ಹೊಂದಿರುವ ಶಾಲೆಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುವ ಮತ್ತು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಗಣನೀಯವಾಗಿ ಕೊಡುಗೆ ನೀಡಿದೆ. ಅದೇ ವೇಗದಲ್ಲಿ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆಂದು ಸುಧಾಮೂರ್ತಿಯವರು ತಿಳಿಸಿದ್ದಾರೆ.
ವಿಜ್ಞಾನ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಕೆಲಸಕ್ಕಾಗಿ ಮೂರ್ತಿ ಅವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2006ರಲ್ಲಿ ಆಗಿನ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು, ಸುಧಾಮೂರ್ತಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.