ವಸತಿ ಮೀಸಲಾತಿಯಡಿ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ: ಎನ್‌ಎಲ್‌ಎಸ್‌ಐಯುಗೆ ಸಚಿವ ಅಶ್ವತ್ಥ್ ನಾರಾಯಣ್ ಸೂಚನೆ
ವಸತಿ ಮೀಸಲಾತಿಯಡಿ ಕನಿಷ್ಠ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು)ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಸೂಚನೆ ನೀಡಿದ್ದಾರೆ.
Published: 27th January 2023 11:00 AM | Last Updated: 27th January 2023 11:00 AM | A+A A-

ಸಚಿವ ಅಶ್ವತ್ಥ್ ನಾರಾಯಣ್
ಬೆಂಗಳೂರು: ವಸತಿ ಮೀಸಲಾತಿಯಡಿ ಕನಿಷ್ಠ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು)ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಗುರುವಾರ ಎನ್‌ಎಲ್‌ಎಸ್‌ಐಯು ಉಪಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರಿಗೆ ಪತ್ರ ಬರೆದಿರುವ ಸಚಿವರು, ಅಖಿಲ ಭಾರತಮಟ್ಟದ ಮೆರಿಟ್ ಕೋಟಾದಡಿ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಸ್ಥಳೀಯ ಮೀಸಲಿನಡಿ ಪರಿಗಣಿಸಿ, ದಾರಿ ತಪ್ಪಿಸುತ್ತಿರುವುದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧ. ವಿಶಾಖಪಟ್ಟಣ, ರಾಯಪುರ, ಕೋಲ್ಕತ್ತ ಮತ್ತಿತರ ನಗರಗಳಲ್ಲಿ ಇಂತಹ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸೀಟುಗಳನ್ನು ಕೊಡಲಾಗುತ್ತಿದೆ. ಇದೇ ಮಾದರಿಯನ್ನು ಬೆಂಗಳೂರಿನ ಲಾ ಸ್ಕೂಲ್ ಅನುಸರಿಸಬೇಕು ಎಂದು ಹೇಳಿದ್ದಾರೆ.
‘2022ನೇ ಸಾಲಿನಲ್ಲಿ ಸಂಸ್ಥೆ 180 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದೆ. 45 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಕೋಟಾದಲ್ಲಿ ಹಂಚಿಕೆ ಮಾಡಬೇಕಿತ್ತು. ಆದರೆ, ಅಖಿಲ ಭಾರತೀಯ ಮೆರಿಟ್ ಕೋಟಾದಡಿ ಆಯ್ಕೆಯಾಗಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನೂ ಸ್ಥಳೀಯ ಮೀಸಲಾತಿಯಡಿ ಪರಿಗಣಿಸಲಾಗಿದೆ. ಉಳಿದ 32 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇದರಿಂದ ರಾಜ್ಯದ 13 ವಿದ್ಯಾರ್ಥಿಗಳು ಅವಕಾಶ ಕಳೆದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘2023ರಲ್ಲಿ 240 ವಿದ್ಯಾರ್ಥಿ ಗಳಿಗೆ ಅವಕಾಶವಿದೆ. 60 ಸೀಟುಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಕೊಡಬೇಕು. ಆಯ್ಕೆ ಪ್ರಕಟಿಸಿದ್ದಲ್ಲಿ ಲೋಪವನ್ನು ಸರಿಪಡಿಸಬೇಕು. ಅಕಸ್ಮಾತ್ ಆಗದಿದ್ದರೆ 'ಸೂಪರ್-ನ್ಯೂಮರಿ' ಮಾನದಂಡ ಪರಿಗಣಿಸಿ, ಆಯ್ಕೆ ಪಟ್ಟಿ ಪರಿಷ್ಕರಿಸಬೇಕು’ ಎಂದು ಸೂಚಿಸಿದ್ದಾರೆ.