
ಸಿಎಂ ಬೊಮ್ಮಾಯಿ
ಬೆಂಗಳೂರು: ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಭರವಸೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಆಯೋಜನೆ ಮಾಡಿರುವ "ವಿಜ್ಞಾನ ಮೇಳ 2023"ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೇವಲ ಕಟ್ಟಡ ಕಟ್ಟಿದರೆ ಸಾಲದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನೂ ಕೊಡಬೇಕು. ಯಾವ ಯಾವ ಶಾಲೆಯಲ್ಲಿ ಏನೇನು ಆಗಬೇಕಿದೆ? ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಪಟ್ಟಿ ನೀಡಿ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ನಾನು ಅನುದಾನ ಕೊಡುತ್ತೇನೆಂದು ಹೇಳಿದರು.
"ವಸತಿ ಶಿಕ್ಷಣ ಸಂಸ್ಥೆಯ ವತಿಯಿಂದ ವಿಜ್ಞಾನ ಮೇಳ ನಡೆಯುತ್ತಿರುವುದು ಸಂತಸದ ವಿಷಯ. ಈ ವಸತಿ ಶಾಲೆಗಳನ್ನು ಸ್ಥಾಪಿಸಿರುವುದರ ಹಿಂದಿನ ಮುಖ್ಯ ಉದ್ದೇಶ ಎಸ್ ಸಿ ಎಸ್ ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಒದಗಿಸಬೇಕು ಎಂಬುದು. ಅದರಂತೆಯೇ ಈ ಶಿಕ್ಷಣ ಸಂಸ್ಥೆಗಳ ಮೌಲ್ಯ ಮಾಪನದಿಂದ,
— CM of Karnataka (@CMofKarnataka) January 27, 2023
1/2 pic.twitter.com/sB6lXpsJnm
ಶಾಲೆಗಳಿಗೆ ಕೊಡುವ ಅನುದಾನ ಜಾಸ್ತಿಯಾಗುತ್ತಿದೆ. ಆದರೆ, ಅಭಿವೃದ್ಧಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಮಕ್ಕಳಿಗೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಮೊದಲು ಮಕ್ಕಳ ಭವಿಷ್ಯ, ಆ ನಂತರ ಕಾಂಟ್ಯಾಕ್ಟ್ರರ್ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ವಸತಿ ಶಾಲೆಗಳಲ್ಲಿ ಕೇಲವ ಕಟ್ಟಡ ಹೆಚ್ಚಾಗುತ್ತಿದೆ. ಕೇವಲ ಕಾಂಟ್ರ್ಯಾಕ್ಟರ್ ಆಧಾರಿತ ಕೆಲಸ ಮಾಡಿದರೆ ಪ್ರಯೋಜನ ಇಲ್ಲ. ಬಿಲ್ಡಿಂಗ್ ವೆಚ್ಚ 5-10 ಕೋಟಿ ರೂ. ಆದರೆ ಇದೀಗ 20-30 ಕೋಟಿ ರೂ ಆಗಿದೆ. ಕೇವಲ ಕಟ್ಟಡ ಕಟ್ಟುವುದು ಬಿಟ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸಿ" ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಸತಿ ಶಾಲೆ ಇಲ್ಲಿವರೆಗೂ ಎಸ್ಎಸ್ಎಲ್ಸಿ ವರೆಗೆ ಮಾತ್ರ ಇತ್ತು. ಬರುವ ವರ್ಷ ಅಲ್ಲಿ ಪಿಯುಸಿಯನ್ನು ಕಡ್ಡಾಯ ಮಾಡಿ. ಎಲ್ಲಿ ವ್ಯವಸ್ಥೆ ಇದೆಯೋ ಅಲ್ಲಿ ಪಿಯುಸಿ ಮುಂದುವರಿಸಬೇಕು. ಈ ಶಾಲೆಗಳಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆ ಮಾಡಿ" ಎಂದು ಸೂಚನೆ ನೀಡಿದರು.
ತಂದೆ ತಾಯಂದಿರು ಸಾಕಷ್ಟು ನಿರೀಕ್ಷೆ ಇಟ್ಟು ಮಕ್ಕಳನ್ನು ವಸತಿ ಶಾಲೆಗೆ ಕಳುಹಿಸಿ ಕೊಡುತ್ತಾರೆ. ಮಕ್ಕಳ ಭವಿಷ್ಯ ರೂಪಿಸಿದರೆ ಸಮಾಜದಲ್ಲಿ ಬದಲಾವಣೆ ಆಗುತ್ತದೆ. ವಸತಿ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮಾಡಿ. ಮಕ್ಕಳು 60 ರಿಂದ 70 ಪರ್ಸೆಂಟ್ ಪಡೆದು ವಸತಿ ಶಾಲೆಗೆ ಬರುತ್ತಾರೆ. ವಸತಿ ಶಾಲೆಯಿಂದ ಹೊರಹೋಗುವಾಗ ಶೇ.90 ರಷ್ಟು ಫಲಿತಾಂಶ ಪಡೆದು ಹೋಗಬೇಕು" ಎಂದರು.