ಅಮರನಾಥ ಯಾತ್ರೆ ವೇಳೆ ಭೂಕುಸಿತ: ಅತಂತ್ರದಲ್ಲಿ 83 ಮಂದಿ ಕನ್ನಡಿಗರು, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

ಅಮರನಾಥ ಯಾತ್ರೆಗೆ ತೆರಳುವ ಮಾರ್ಗಮಧ್ಯೆ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕದ 83 ಮಂದಿ ಯಾತ್ರಾರ್ಥಿಗಳೆ ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳು.
ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳು.
Updated on

ಗದಗ: ಅಮರನಾಥ ಯಾತ್ರೆಗೆ ತೆರಳುವ ಮಾರ್ಗಮಧ್ಯೆ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕದ 83 ಮಂದಿ ಯಾತ್ರಾರ್ಥಿಗಳೆ ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ಪೈಕಿ 23 ಮಂದಿ ಯಾತ್ರಾರ್ಥಿಗಳು ಗದಗ ಜಿಲ್ಲೆಯವರು ಎಂದು ಹೇಳಲಾಗುತ್ತಿದೆ. ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸ್ಥಳದಿಂದಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಡಿಯೋ ಕಳುಹಿಸಿದ್ದು, ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳದಲ್ಲಿ 1,000 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದು, ಈ ಪೈಕಿ 83 ಮಂದಿ ಕರ್ನಾಟಕದವರು ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಅಮರನಾಥದ ಪಂಚತಾರ್ನಿ ಮಿಲಿಟರಿ ಬೇಸ್ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಪ್ರಾಧಿಕಾರದ ಆಯುಕ್ತ ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉತ್ತರಾಖಂಡಕ್ಕೆ ತೆರಳುತ್ತಿದ್ದು, ಪರಿಸ್ಥಿತಿ ಅವಲೋಕನ ನಡೆಸಲಿದೆ ಎಂದು ವರದಿಗಳು ತಿಳಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಸುನೀಲ್ ಕುಮಾರ್ ಅವರು, ಸ್ಥಳಕ್ಕೆ ತೆರಳುವ ಅಧಿಕಾರಿಗಳು, ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಹಾಗೂ ಅಮರನಾಥ ದೇಗುಲ ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಗದಗದ 23 ಮಂದಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಸ್ಥಳದಲ್ಲಿ 83 ಮಂದಿ ಕನ್ನಡಿಗರಿರುವುದಾಗಿ ಹೇಳಲಾಗುತ್ತಿದೆ. ಕನ್ನಡಿಗರ ಕುರಿತು ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಈವರೆಗೂ ಎಲ್ಲರೂ ಸುರಕ್ಷಿತರಾಗಿದ್ದು, ಶೀಘ್ರಗತಿಯಲ್ಲಿ ಅವರೆಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಗದಗದಿಂದ ಜುಲೈ 4 ರಂದು ಯಾತ್ರೆಗೆ ತೆರಳಿದ್ದ ತಂಡ ಜುಲೈ 6 ರಂದು ಅಮರನಾಥ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಅವರು ಹೆಲಿಕಾಪ್ಟರ್ ಸೇವೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಇದೀಗ ಎಲ್ಲರೂ ಬೇಸ್ ಕ್ಯಾಂಪ್‌ನಲ್ಲಿ ಆಶ್ರಯ ಪಡೆದುಕೊಂಡಿರುವುದಾಗಿ ಮಾಹಿತಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಕ್ಯಾಂಪ್ ನಲ್ಲಿ ಉಳಿದುಕೊಂಡಿರವವರಿಗೆ ಭಾರೀ ಮಳೆಯಿಂದಾಗಿ ಅವರಿಗೆ ಆಹಾರ ಸಿಗುತ್ತಿಲ್ಲ. ಅಧಿಕಾರಿಯೊಬ್ಬರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಹವಾಮಾನ ಸಹಜ ಸ್ಥಿತಿಗೆ ಮರಳಿದ ಬಳಿಕ ಸೇನಾ ಹೆಲಿಕಾಪ್ಟರ್‌ಗಳ ವ್ಯವಸ್ಥೆಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.

ಗದಗ ಎಸ್ಪಿ ಬಿ.ಎಸ್.ನೇಮಗೌಡ ಮಾತನಾಡಿ, ಅಮರನಾಥದಲ್ಲಿ ಜಿಲ್ಲೆಯ ಒಟ್ಟು 23 ಮಂದಿ ಸಿಲುಕಿಕೊಂಡಿದ್ದಾರೆ. ಬೆಂಗಳೂರು ಮತ್ತು ಅಮರನಾಥದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಶೀಘ್ರದಲ್ಲೇ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com