ಬೆಂಗಳೂರು: ಜೈನ ಮುನಿ ಹತ್ಯೆ ಮಾಡಿ 9 ತುಂಡು ಮಾಡಿರುವುದನ್ನು ನೋಡಿದರೆ ಇದಕ್ಕೆ ಇಸಿಸ್ ನಂಟಿದೆಯಾ ಎನ್ನುವ ಅನುಮಾನ ಬರುತ್ತಿದೆ ಎಂದು ಬಿಜೆಪಿ ಎಂಎಲ್ಸಿ ನಾರಾಯಣಸ್ವಾಮಿ ಅವರು ಮಂಗಳವಾರ ಹೇಳಿದರು.
ವಿಧಾನ ಪರಿಷತ್ ನಲ್ಲಿ ನಿಯಮ 68ರ ಅಡಿ ನಡೆದ ಚರ್ಚೆ ವೇಳೆ ಮಾತನಾಡಿರುವ ಅವರು, ನಾವು ಇಸಿಸ್ ಭಯೋತ್ಪಾದಕರು ಯಾವ ರೀತಿ ಟಾರ್ಜರ್ ಕೊಡುತ್ತಾರೆ ಎಂದು ಕೇಳಿದ್ದೆವು. ಇಲ್ಲಿ ಜೈನ ಮುನಿ ಹತ್ಯೆ ಮಾಡಿ 9 ತುಂಡು ಮಾಡಿರುವುದನ್ನು ನೋಡಿದರೆ ಇದಕ್ಕೆ ಇಸಿಸ್ ನಂಟಿದೆಯಾ ಎಂಬ ಅನುಮಾನ ಬರುತ್ತಿದೆ ಎಂದು ಹೇಳಿದರು.
ಇಸಿಸ್ ಕೇರಳಕ್ಕೆ ಬಂದಿದೆ. ಕರ್ನಾಟಕ್ಕೂ ಬರಲಿದೆ. ಇದು ಇಸಿಸ್ ಮಾದರಿಯ ಹತ್ಯೆಯಾಗಿದೆ. ಹಾಗಾಗಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ತೇಜಸ್ವಿನಿಗೌಡ ಅವರು, ಕುಕ್ಕರ್ ಬಾಂಬ್, ಶಿವಮೊಗ್ಗ ಘಟನೆ ನಾವು ಲಘುವಾಗಿ ಪರಿಗಣಿಸಿದೆವು. ಆದರೆ, ಎನ್ಐಎ ತನಿಖೆ ನಂತರವೇ ಇದರ ಆಳ ಅಗಲು ಗೊತ್ತಾಯಿತು. ಹಾಗಾಗಿ ಈ ಪ್ರಕರಣವನ್ನೂ ಲಘುವಾಗಿ ಪರಿಗಣಿಸಬಾರದು. ಸರ್ಕಾರದ ಉತ್ತರ ತುಂಬಾ ಜಾಳವಾಗಿದೆ, 6 ಲಕ್ಷ ಹಣಕ್ಕೆ ಮುನಿಯ ಹತ್ಯೆ ಯಾರೂ ನಂಬಲು ಸಾಧ್ಯವಿಲ್ಲ. ಹಾಗಾಗಿ ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಿಯೋಗದಿಂದ ಇಂದು ರಾಜ್ಯಪಾಲರ ಭೇಟಿ
ಈ ನಡುವೆ ಬಿಜೆಪಿ ನಿಯೋಗವು ಬುಧವಾರ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕೋರಿ ಮನವಿ ಪತ್ರ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.
Advertisement