ಚಾಮರಾಜನಗರ: ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕಿ ಸಾವು, ಸರ್ಕಾರದಿಂದ 15 ಲಕ್ಷ ರೂ ಪರಿಹಾರ
ಚಾಮರಾಜನಗರ: ಇತ್ತೀಚೆಗೆ ಚಾಮರಾಜನಗರದಲ್ಲಿ ಚಿರತೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಚಿರತೆ ದಾಳಿಯಿಂದ ಬಾಲಕಿಯ ದವಡೆ ಮೂಳೆ ಮುರಿದಿದ್ದ ಪರಿಣಾಮ ಮುಖ ಊದಿಕೊಂಡಿದ್ದು, ಕಳೆದ 14 ದಿನಗಳಿಂದ ಮೈಸೂರಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 11ರಂದು ಆಪರೇಷನ್ ಕೂಡ ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನು, ಚಿರತೆ ದಾಳಿ ಪ್ರಕರಣ ನಡೆದು ಸುಮಾರು 14 ದಿನಗಳು ಕಳೆದಿದೆ. ಚಿರತೆ ಸೆರೆಗಾಗಿ ಚಿರತೆ ದಾಳಿ ನಡೆಸಿದ ಸ್ಥಳ ಹಾಗೂ ಅಕ್ಕಪಕ್ಕದಲ್ಲಿ ಮೂರು ಬೋನ್‌ಗಳನ್ನು ಸಹ ಇಡಲಾಗಿತ್ತು. ಆದರೆ ಇದುವರೆಗೂ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದಿಂದ 15 ಲಕ್ಷ ರೂ ಪರಿಹಾರ
ಇನ್ನು ಚಿರತೆ ದಾಳಿಯಿಂದ ಮೃತಪಟ್ಟ ಬಾಲಕಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ಮೃತ ಬಾಲಕಿ ಸುಶೀಲ ಕುಟುಂಬಕ್ಕೆ 15 ಲಕ್ಷ ರೂ ಘೋಷಣೆ ಮಾಡಿದೆ. ಮೃತ ಬಾಲಕಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದಾರೆ. 'ಚಿರತೆ ದಾಳಿಗೆ ತುತ್ತಾದ ಬಾಲಕಿ ಸಾವನ್ನಪ್ಪಿರುವ ಘಟನೆಯಿಂದ ಬೇಸರವಾಗಿದೆ. ನಾನು ತಕ್ಷಣ ಆಕೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರವನ್ನು ನಿರ್ದೇಶಿಸುತ್ತೇನೆ ಮತ್ತು ಮೃತರ ಕುಟುಂಬಕ್ಕೆ 4,000 ಮಾಸಿಕ ಭತ್ಯೆ ನೀಡಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದರು.
ಏನಿದು ಘಟನೆ?
ರಾಮು ಮತ್ತು ಲಲಿತಾ ದಂಪತಿಯ ಪುತ್ರಿ ಸುಶೀಲಾ ಒಬ್ಬಳೇ ಮನೆ ಮುಂದೆ ಆಟವಾಡುತ್ತಿದ್ದಳು. ಎಲ್ಲಿಂದಲೋ ಕಾಣಿಸಿಕೊಂಡ ಚಿರತೆ ಬಾಲಕಿಯ ಮೇಲೆ ದಾಳಿ ನಡೆಸಿ ಕಾಡಿಗೆ ಎಳೆದೊಯ್ಯಲು ಯತ್ನಿಸಿತ್ತು. ಅದು ಅವಳನ್ನು 200 ಮೀಟರ್ ವರೆಗೆ ಎಳೆದಿತ್ತು. ಬಾಲಕಿಯ ಕಿರುಚಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಲಾಠಿ ಬೀಸಿ ಚಿರತೆಯನ್ನು ಓಡಿಸಿದ್ದಾರೆ. ಗಲಾಟೆ ಹಿನ್ನೆಲೆಯಲ್ಲಿ ಚಿರತೆ ಬಾಲಕಿಯನ್ನು ಬಿಟ್ಟು ಕಾಡಿಗೆ ಪರಾರಿಯಾಗಿತ್ತು. ಘಟನೆಯಲ್ಲಿ ಬಾಲಕಿ ಸುಶೀಲ ಗಂಭೀರವಾಗಿ ಗಾಯಗೊಂಡಿದ್ದು, ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.
ಚಿರತೆ ದಾಳಿ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಬಾಲಕಿಯನ್ನು ಆಸ್ಪತ್ರೆಗೆ ಭೇಟಿ ಮಾಡಿ ಕುಟುಂಬದವರೊಂದಿಗೆ ಮಾತನಾಡಿದ್ದರು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡ ಅವರನ್ನು ಭೇಟಿ ಮಾಡಿದ್ದರು. ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸೋಲಿಗ ಬುಡಕಟ್ಟಿನ ಜನರು ಅರಣ್ಯಕ್ಕೆ ಸಮೀಪವಿರುವ ಸ್ಥಳದಲ್ಲಿ ವಾಸಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಚಿರತೆ ಹಾವಳಿಯ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ರಾತ್ರಿ ನಡೆದ ಈ ಘಟನೆ ಇಡೀ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮೂಡಿಸಿದೆ. ಇದರಿಂದ ಮನೆಯಿಂದ ಹೊರಗೆ ಕಾಲಿಡಲು, ಜಮೀನಿಗೆ ಹೋಗಲು ಭಯವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಚಿರತೆ ದಾಳಿಯ ಭೀತಿಯಲ್ಲಿ ಜನ ಜೀವನ ನಡೆಸುವಂತಾಗಿದೆ.
ಮನೆಗೇ ನುಗ್ಗಿದ ಚಿರತೆ
ಮತ್ತೊಂದು ಘಟನೆಯಲ್ಲಿ ವಾಸದ ಮನೆಗೆ ಚಿರತೆ ನುಗ್ಗಿದ ಘಟನೆ ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರು ವಾಸವಾಗಿರುವ ಮನೆಗೆ ಚಿರತೆ ನುಗ್ಗಿದೆ. ಧರ್ಮ ಅವರ ವಾಸದ ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಜಾನುವಾರುಗಳು ಇದ್ದ ಕಾರಣ ಅಹಾರ ಅರಸಿ ಚಿರತೆ ಮನೆಗೆ ನುಗ್ಗಿದೆ. ನಂತರ ಸ್ಥಳೀಯರ ಮಾಹಿತಿ ಆಧಾರಿಸಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ