ಮುಂದಿನ ವಿಚಾರಣೆವರೆಗೆ ಜಿಲ್ಲಾ ನ್ಯಾಯಾಧೀಶರೇ ಮುರುಘಾ ಮಠದ ಹಂಗಾಮಿ ಆಡಳಿತಾಧಿಕಾರಿ; ಕರ್ನಾಟಕ ಹೈಕೋರ್ಟ್
ಚಿತ್ರದುರ್ಗದ ಮುರುಘಾ ಮಠ ಮತ್ತು ಅದರ ಶಿಕ್ಷಣ ಸಂಸ್ಥೆಗಳ ಹಂಗಾಮಿ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಹೊರಡಿಸಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್ ಮಂಗಳವಾರ ವಿಸ್ತರಿಸಿದೆ. ಮುಂದಿನ ವಿಚಾರಣೆ ನಡೆಯುವವರೆಗೂ ಜಿಲ್ಲಾ ನ್ಯಾಯಾಧೀಶರೇ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ ಎಂದಿದೆ.
Published: 19th July 2023 12:50 PM | Last Updated: 19th July 2023 12:50 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಮಠ ಮತ್ತು ಅದರ ಶಿಕ್ಷಣ ಸಂಸ್ಥೆಗಳ ಹಂಗಾಮಿ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಹೊರಡಿಸಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್ ಮಂಗಳವಾರ ವಿಸ್ತರಿಸಿದೆ. ಮುಂದಿನ ವಿಚಾರಣೆ ನಡೆಯುವವರೆಗೂ ಜಿಲ್ಲಾ ನ್ಯಾಯಾಧೀಶರೇ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ ಎಂದಿದೆ.
ಉಸ್ತುವಾರಿಯನ್ನು ಹೇಗೆ ನೇಮಿಸಲಾಯಿತು ಮತ್ತು ನೇಮಕಾತಿಗೆ ಯಾವ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಎಂಬ ವಿವರಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ಮಠಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು, ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮುಂದಿನ ವಿಚಾರಣೆಯು ಆಗಸ್ಟ್ 8ರಂದು ನಡೆಯಲಿದ್ದು, ಜುಲೈ 4ರಂದು ಹೈಕೋರ್ಟ್ ಆದೇಶದ ಮೇರೆಗೆ ಅಧಿಕಾರ ವಹಿಸಿಕೊಂಡಿದ್ದ ಹಂಗಾಮಿ ಆಡಳಿತಾಧಿಕಾರಿ ಅಲ್ಲಿಯವರೆಗೆ ಮುಂದುವರಿಯಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಆಯ್ಕೆ
ಮಠದ ಪರ ವಕೀಲ ಜಯಕುಮಾರ ಎಸ್ ಪಾಟೀಲ್ ವಾದ ಮಂಡಿಸಿ, ಶಾಖಾ ಮಠದ ಸ್ವಾಮೀಜಿ (ಬಸವ ಪ್ರಭು) ಉಸ್ತುವಾರಿಯಾಗಿ ವ್ಯವಹಾರ ನಡೆಸುತ್ತಿದ್ದು, ಪೊಕ್ಸೊ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಠಾಧೀಶ ಶಿವಮೂರ್ತಿ ಶರಣರಿಂದ ಪವರ್ ಆಫ್ ಅಟಾರ್ನಿ ಪಡೆದಿದ್ದಾರೆ. ಮಠದ ದೈನಂದಿನ ಚಟುವಟಿಕೆಗಳಿಗೆ ಯಾವುದೇ ಅಡೆತಡೆಗಳಿಲ್ಲ ಮತ್ತು ಆಡಳಿತದ ಮೇಲ್ವಿಚಾರಣೆಗೆ 20 ಸದಸ್ಯರ ಸಮಿತಿಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಕುಟುಂಬದ ಮುಖ್ಯಸ್ಥರು ಜೈಲು ಪಾಲಾದಾಗ ಅದೇ ಕುಟುಂಬದ ಇನ್ನೊಬ್ಬರು ಆ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಮತ್ತು ಹೊರಗಿನವರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಮಾಡುವುದು ಅಸಹಜ. ಅದೇ ರೀತಿಯಲ್ಲಿ ಮಠದ ಒಳಗಿನವರಿಗೇ ಯಾರಿಗಾದರೂ ಉಸ್ತುವಾರಿಯನ್ನು ನೀಡಬೇಕು ಎಂದು ಪಾಟೀಲ್ ವಾದಿಸಿದರು.
ಹೈಕೋರ್ಟ್ ಈಗಾಗಲೇ ಜಿಲ್ಲಾ ನ್ಯಾಯಾಧೀಶರನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವುದರಿಂದ ಸರ್ಕಾರದ ಹಸ್ತಕ್ಷೇಪ ಸೀಮಿತವಾಗಿದೆ ಎಂದು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನೂ ಓದಿ: ಮುರುಘಾ ಮಠದ ಆಡಳಿತಾಧಿಕಾರಿಯಾಗಿ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದ ಕರ್ನಾಟಕ ಹೈಕೋರ್ಟ್
ಮಠವು ಉತ್ತರಾಧಿಕಾರಿ ಅಥವಾ ಉಸ್ತುವಾರಿಯನ್ನು ನೇಮಿಸುವಾಗ ಕಳೆದ 300 ವರ್ಷಗಳಿಂದ ಅನುಸರಿಸುತ್ತಿರುವ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಸದ್ಯದ ಉಸ್ತುವಾರಿಯನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡುವಂತೆ ಹೈಕೋರ್ಟ್ ಮಠಕ್ಕೆ ಕೇಳಿದೆ.
ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳ ರಕ್ಷಣೆಯು ಇನ್ನೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಾರದು ಎಂದು ನ್ಯಾಯಾಲಯ ಹೇಳಿದೆ.