ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ; ಶಿಕ್ಷಕನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ನ್ಯಾಯಾಲಯ!
ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕನಿಗೆ ಮಂಗಳೂರು ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Published: 27th July 2023 01:04 PM | Last Updated: 27th July 2023 01:04 PM | A+A A-

ಸಾಂದರ್ಭಿಕ ಚಿತ್ರ
ದಕ್ಷಿಣ ಕನ್ನಡ: ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕನಿಗೆ ಮಂಗಳೂರು ತ್ವರಿತಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2014ರ ಆಗಸ್ಟ್ 1ರಿಂದ 2016ರ ಸೆಪ್ಟೆಂಬರ್ 2ರವರೆಗೆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 33 ವರ್ಷದ ಶಿಕ್ಷಕ ಪೃಥ್ವಿರಾಜ್‌ಗೆ ಶಿಕ್ಷೆ ವಿಧಿಸಿ ಮಂಗಳೂರು ತ್ವರಿತಗತಿ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಬುಧವಾರ ಆದೇಶ ಹೊರಡಿಸಿದ್ದಾರೆ.
ನ್ಯಾಯಾಧೀಶರು ಅವರಿಗೆ ಪೊಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಸಂತ್ರಸ್ತನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಶಿಕ್ಷಕ ಪೃಥ್ವಿರಾಜ್ ತನ್ನನ್ನು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ್ದಾಗಿ ಸಂತ್ರಸ್ತ ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಸಂತ್ರಸ್ತನನ್ನು ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದಾನೆ ಮತ್ತು ಇಲ್ಲದಿದ್ದರೆ ಆತನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರವನ್ನು ಯಾರಿಗೂ ಹೇಳದಂತೆ ಬಾಲಕನಿಗೆ ಎಚ್ಚರಿಕೆ ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆದರೆ, ಸಂತ್ರಸ್ತನ ಖಾಸಗಿ ಭಾಗಕ್ಕೆ ಗಾಯವಾಗಿದ್ದರಿಂದ, ಆತನನ್ನು ವೈದ್ಯರ ಬಳಿ ಕರೆದೊಯ್ದ ಬಳಿಕ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.