'ರಸ್ತೆ, ಪೊಲೀಸ್ ಠಾಣೆ ಮುಂದೆ ಶವ ಇರಿಸಿ ಪ್ರತಿಭಟಿಸಬೇಡಿ: ಮೃತ ದೇಹದ ಘನತೆ ಕಾಪಾಡಿ'
ಪರಿಹಾರ ಅಥವಾ ಉತ್ತಮ ಸೌಕರ್ಯಗಳಿಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜನರು ಕಾನೂನುಬಾಹಿರವಾಗಿ ರಸ್ತೆ ಅಥವಾ ಪೊಲೀಸ್ ಠಾಣೆಗಳ ಮುಂದೆ ಶವಗಳನ್ನು ಇರಿಸಿಕೊಂಡು ಪ್ರತಿಭಟನೆ ನಡೆಸಬಾರದು
Published: 01st June 2023 08:51 AM | Last Updated: 01st June 2023 08:51 AM | A+A A-

ಹೈಕೋರ್ಟ್
ಬೆಂಗಳೂರು: ಪರಿಹಾರ ಅಥವಾ ಉತ್ತಮ ಸೌಕರ್ಯಗಳಿಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜನರು ಕಾನೂನುಬಾಹಿರವಾಗಿ ರಸ್ತೆ ಅಥವಾ ಪೊಲೀಸ್ ಠಾಣೆಗಳ ಮುಂದೆ ಶವಗಳನ್ನು ಇರಿಸಿಕೊಂಡು ಪ್ರತಿಭಟನೆ ನಡೆಸಬಾರದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಈ ವಿಷಯ ಉಲ್ಲೇಖಿಸಿರುವ ರಾಜ್ಯ ಉಚ್ಛ ನ್ಯಾಯಾಲಯ, ಮೃತ ಸಂಬಂಧಿಕರು, ಶವಗಳನ್ನು ಇಟ್ಟುಕೊಂಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಳಿಸುವುದು, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವ ವರದಿಗಳನ್ನು ನಾವು ವೃತ್ತ ಪತ್ರಿಕೆಯಲ್ಲಿ ನೋಡಿದ್ದೇವೆ.
ಸತ್ತವರಿಗೆ ಸಮಾಜವು ಅಂತಹ ಅವಮಾನ ಮಾಡಬಾರದು. ಜನರು ದುರುಪಯೋಗಪಡಿಸಿಕೊಂಡ ದೇಹಗಳನ್ನು ಅವರ ಯೋಗ್ಯ ಮತ್ತು ಗೌರವಾನ್ವಿತ ಅಂತ್ಯಕ್ರಿಯೆಗಾಗಿ ರಾಜ್ಯವು ಸ್ವಾಧೀನಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಸತ್ತವರ, ವಿಶೇಷವಾಗಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಸರ್ಕಾರಿ ಮತ್ತು ಖಾಸಗಿ ಶವಾಗಾರಗಳಲ್ಲಿ ಆರು ತಿಂಗಳೊಳಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ. ಮಹಿಳೆಯರ ಮೃತದೇಹದ ಜೊತೆಗೆ ನಡೆಯುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಆರು ತಿಂಗಳ ಒಳಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಶವಾಗಾರಗಳಲ್ಲಿ ಶುಚಿತ್ವ ಕಾಪಾಡಬೇಕು. ಮೃತ ದೇಹಗಳನ್ನು ಗೌರವಯುತವಾಗಿ ಸಂರಕ್ಷಿಸಿ ಎಂದು ಹೈಕೋರ್ಟ್ ಸೂಚಿಸಿದೆ.
ವೈದ್ಯಕೀಯ ದಾಖಲೆಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಿ ಮತ್ತು ಸತ್ತವರಿಗೆ ಸಂಬಂಧಿಸಿದ ಮಾಹಿತಿಯನ್ನು ಕಾಪಾಡುವ ಕಾರ್ಯವಿಧಾನವನ್ನು ಅನುಸರಿಸಿ, ವಿಶೇಷವಾಗಿ HIV ಮತ್ತು ಆತ್ಮಹತ್ಯೆ ಪ್ರಕರಣಗಳಲ್ಲಿ ಗೌಪ್ಯತೆ ಕಾಪಾಡುವಂತೆ ಆದೇಶಿಸಿದೆ. ಮರಣೋತ್ತರ ಪರೀಕ್ಷೆ ಕೊಠಡಿಗಳಲ್ಲಿ ಸಾರ್ವಜನಿಕರಿಗೆ ನಿಷೇಧ ಮಾಡಬೇಕು.
ಶವಪರೀಕ್ಷೆ ನಡೆಸುವ ಕೋಣೆಗಳು ಸಾರ್ವಜನಿಕರ ನೇರ ದೃಷ್ಟಿಗೆ ಬೀಳುವಂತಿರಬಾರದು. ಶವಪರೀಕ್ಷಾ ಕೇಂದ್ರಗಳನ್ನು ನಿಷೇಧಿತ ಪ್ರದೇಶ ಎಂದು ನಿರ್ವಹಣೆ ಮಾಡಬೇಕು. ಭಾರತೀಯ ಸಾರ್ವಜನಿಕ ಪ್ರಮಾಣಿಕೃತ ಮಾನದಂಡಗಳ (ಐಎಸ್‌ಐ) ಪ್ರಕಾರ ಶವ ನಿರ್ವಹಣೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಶವಾಗಾರದ ಆಡಳಿತವು ತನ್ನ ಸಿಬ್ಬಂದಿಗೆ ಶವಗಳ ನಿರ್ವಹಣೆ ಮತ್ತು ಮೃತರ ಸಂಬಂಧಿಕರ ಜೊತೆ ವ್ಯವಹರಿಸುವಾಗ ಸಂವೇದನಾಶೀಲತೆ ಹೊಂದಿರುವುದನ್ನು ಕಲಿಸಬೇಕು. ಈ ದಿಸೆಯಲ್ಲಿ ಅವರಿಗೆ ಕಾಲಕಾಲಕ್ಕೆ ತರಬೇತಿ ನೀಡಬೇಕು ಎಂದು ಹೈಕೋರ್ಟ್ ಶಿಫಾರಸ್ಸು ಮಾಡಿದೆ.