ಬಿಬಿಎಂಪಿ ಚುನಾವಣೆಗೆ ಸಿದ್ಧರಾಗಿ: ಕಾಂಗ್ರೆಸ್‌ನ ಮಾಜಿ ಮೇಯರ್‌ಗಳಿಗೆ ಡಿಕೆ.ಶಿವಕುಮಾರ್ ಸೂಚನೆ

ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಬಿಬಿಎಂಪಿ ಚುನಾವಣೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಚುನಾವಣೆಗೆ ಸಿದ್ಧತೆ ನಡೆಸುವಂತೆ ನಾಯಕರಿಗೆ ಸೂಚನೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಗಳೊಂದಿಗೆ ಸಭೆ ನಡೆಸಿದ ಡಿಕೆ.ಶಿವಕುಮಾರ್.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಗಳೊಂದಿಗೆ ಸಭೆ ನಡೆಸಿದ ಡಿಕೆ.ಶಿವಕುಮಾರ್.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಬಿಬಿಎಂಪಿ ಚುನಾವಣೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಚುನಾವಣೆಗೆ ಸಿದ್ಧತೆ ನಡೆಸುವಂತೆ ನಾಯಕರಿಗೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಮೇಯರ್‌ಗಳೊಂದಿಗೆ ನಿನ್ನೆ 2 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಾಜಿ ಮೇಯರ್‌ಗಳೊಂದಿಗೆ ಸಭೆ ನಡೆಸಿ, ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದಿದ್ದೇನೆ. ಸಭೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹೇಗೆ ಸಂಪನ್ಮೂಲ ಕ್ರೋಡೀಕರಿಸಬಹುದು ಮತ್ತು ನ್ಯೂನತೆಗಳೇನು, ತ್ಯಾಜ್ಯ ನಿರ್ವಹಣೆ ಮತ್ತು ರಸ್ತೆಗಳಲ್ಲಿ ಕಸ ಹಾಕುವುದಕ್ಕೆ ಸಂಬಂಧಿಸಿದ ಸಮಸ್ಯೆಗಳೇನು, ಅದನ್ನು ತಡೆಯುವುದು ಹೇಗೆ, ಕಸದ ವಾಹನಗಳ ಮೇಲೆ ನಿಗಾ ಇಡುವುದು, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಕುರಿತಂತೆಯೂ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಡಳಿತ ಸುವ್ಯವಸ್ಥಿತಗೊಳಿಸಲು ಯಾವ ಸೂಚನೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಸೋಮವಾರ ನಗರದ ಸರ್ವಪಕ್ಷಗಳ ಶಾಸಕರ ಸಭೆಯನ್ನು ಕರೆಯಲಾಗಿದ್ದು, ಅವರಿಂದಲೂ ಸಲಹೆಗಳನ್ನು ಪಡೆಯಲಾಗುವುದು. ಬಳಿಕ ಕಾಂಗ್ರೆಸ್ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸುತ್ತೇನೆಂದು ಹೇಳಿದರು. ಇದೇ ವೇಳೆ ಆಸ್ತಿ ತೆರಿಗೆ ಪಾವತಿ ವಿನಾಯಿತಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕದ ಮೊದಲು ವಾರ್ಷಿಕ ತೆರಿಗೆಯನ್ನು ಪಾವತಿಸಿದರೆ, ಶೇ.5 ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಾರ್ಡ್ ಪುನರ್ ವಿಂಗಡಣೆ ಕುರಿತು ಮಾತನಾಡಿ, ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇದಕ್ಕಾಗಿ ನೇಮಿಸಿರುವ ಸಮಿತಿಯೊಂದಿಗೆ ಚರ್ಚಿಸುತ್ತೇವೆ. ಪಕ್ಷದ ಬಿಬಿಎಂಪಿ ಮಾಜಿ ಮೇಯರ್ ಗಳು ಬಿಬಿಎಂಪಿ ಚುನಾವಣೆಗೆ ಸಿದ್ಧರಾಗಿರಬೇಕು. ಆಕಾಂಕ್ಷಿ ಅಭ್ಯರ್ಥಿಗಳು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕೆಂದು ಮನವಿ ಮಾಡಿಕೊಂಡರು.

2028 ರ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ದೂರದೃಷ್ಟಿಯಿಂದ ಮಾಜಿ ಮೇಯರ್‌ಗಳು ಮತ್ತು ಪಕ್ಷದ ನಾಯಕರು ಕೆಲಸ ಮಾಡಬೇಕು. 175 ವಾರ್ಡ್‌ಗಳಲ್ಲಿ ಗೆಲುವು ಸ್ಪಷ್ಟವಾಗಿದ್ದರೂ, ಯೋಧರಂತೆ ಕೆಲಸ ಮಾಡುವ ಅಗತ್ಯವಿದೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯ ಗೆಲುವು ಹಿನ್ನೆಲೆಯಲ್ಲಿ ಅತೀಯಾದ ಆತ್ಮವಿಶ್ವಾಸ ಬೇಡ ಎಂದು ಇದೇ ವೇಳೆ ಕಿವಿ ಮಾತು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com