ಇಂದು ಸಚಿವ ಸಂಪುಟ ಸಭೆ: ಉಚಿತ ಪ್ರಯಾಣ ಸೇರಿ 5 ಗ್ಯಾರಂಟಿಗಳತ್ತ ಎಲ್ಲರ ಚಿತ್ತ, ಬಸ್ ಪಾಸ್ ಖರೀದಿಗೆ ಮಹಿಳೆಯರು ಮೀನಾಮೇಷ!

ರಾಜ್ಯಾದ್ಯಂತ ಜನರು ಕಾತುರದಿಂದ ಕಾಯುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಶುಕ್ರವಾರ ಮಹತ್ವದ ಸಚಿವ ಸಂಪುಟ ನಡೆಯಲಿದ್ದು, ಉಚಿತ ಪ್ರಯಾಣ ಸೇರಿದಂತೆ 5 ಯೋಜನೆಗಳ ಅಧಿಕೃತ ಆರಂಭ ಕುರಿತು ಘೋಷಣೆ ಹೊರಬೀಳುವ ನಿರೀಕ್ಷೆಗಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯಾದ್ಯಂತ ಜನರು ಕಾತುರದಿಂದ ಕಾಯುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಶುಕ್ರವಾರ ಮಹತ್ವದ ಸಚಿವ ಸಂಪುಟ ನಡೆಯಲಿದ್ದು, ಉಚಿತ ಪ್ರಯಾಣ ಸೇರಿದಂತೆ 5 ಯೋಜನೆಗಳ ಅಧಿಕೃತ ಆರಂಭ ಕುರಿತು ಘೋಷಣೆ ಹೊರಬೀಳುವ ನಿರೀಕ್ಷೆಗಳಿವೆ.

ಈ ನಡುವಲ್ಲೇ ಉಚಿತ ಬಸ್ ಪ್ರಯಾಣ ಕುರಿತು ಸರ್ಕಾರದ ಘೋಷಣೆಗಾಗಿ ಕಾದು ಕುಳಿತಿರುವ ರಾಜ್ಯದ ಮಹಿಳೆಯರು, ಮಾಸಿಕ ಬಸ್ ಪಾಸ್ ಗಳ ಖರೀದಿಯಿಂದ ಹಿಂದೆ ಸರಿದು, ಟಿಕೆಟ್ ಗಳನ್ನು ಖರೀದಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ವಿಶ್ವಾಸವಿದ್ದು, ಘೋಷಣೆಗಾಗಿ ಕಾಯುತ್ತಿದ್ದೇವೆಂದು ಮಹಿಳಾ ಮಣಿಗಳು ಹೇಳುತ್ತಿದ್ದಾರೆ.

ಬಿಎಂಟಿಸಿಗಳ ಸಾಮಾನ್ಯ ಬಸ್'ಗೆಳಿಗೆ ಪ್ರತೀ ತಿಂಗಳು 1,050 ರುಪಾಯಿ ವೆಚ್ಚವಾಗುತ್ತದೆ. ಶುಕ್ರವಾರ ಸರ್ಕಾರ ಸಂಪುಟ ಸಭೆ ನಡೆಸುತ್ತಿದ್ದು, ಯೋಜನೆ ಘೋಷಣೆಯಾಗುವ, ಜಾರಿಯಾಗುವ ನಿರೀಕ್ಷೆಯಿದೆ. ಯೋಜನೆ ಘೋಷಣೆಯಾಗಿದ್ದೇ ಆದರೆ, ಮಾಸಿಕ ಪಾಸ್ ವ್ಯಕ್ತವಾಗುತ್ತದೆ. ಹೀಗಾಗಿ ಖರೀದಿ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಎಂಜಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಾಲತಿ ಎಂಬುವವರು, ಅಜಾದ್ ನಗರದಿಂದ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಾರೆ.

ಪ್ರತೀ ತಿಂಗಳೂ ಮಾಸಿಕ ಪಾಸ್ ಖರೀದಿ ಮಾಡುತ್ತಿದ್ದೆ. ಮೇ.31 ರಂದು ಪಾಸ್ ಅಂತಿಮಗೊಂಡಿತ್ತು. ಸಾಮಾನ್ಯವಾಗಿ ಪ್ರತೀ ತಿಂಗಳೂ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತಿಂಗಳ 30ನೇ ತಾರೀಖಿನಂದು ಪಾಸ್ ಖರೀದಿ ಮಾಡತ್ತಿದ್ದೆ. ಸರ್ಕಾರ ಉಚಿತ ಪ್ರಯಾಣ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿಗಾಗಿ ಕಾಯುತ್ತಿದ್ದೇನೆ. ಹೀಗಾಗಿ ಟಿಕೆಟ್ ಖರೀದಿ ಮಾಡಿ ಪ್ರಯಾಣಿಸುತ್ತಿದ್ದೇನೆಂದು ಹೇಳಿದ್ದಾರೆ.

ಕೇವಲ ನಾನಷ್ಟೇ ಅಲ್ಲ, ಸಾಕಷ್ಟು ಮಹಿಳೆಯರೂ ಕೂಡ ಇದೇ ರೀತಿ ಮಾಡುತ್ತಿದ್ದಾರೆ. 70 ರೂಪಾಯಿಗಳ ದೈನಂದಿನ ಪಾಸ್‌ಗಳನ್ನು ಖರೀದಿಸುತ್ತಿದ್ದಾರೆ. ಪ್ರಯಾಣ ದರ 70 ರೂಪಾಯಿಗಿಂತ ಕಡಿಮೆಯಿದ್ದರೆ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಆವಲಹಳ್ಳಿ ನಿವಾಸಿ ರತ್ನಮ್ಮ, ಕೆಲಸದ ನಿಮಿತ್ತ ಸೇಂಟ್ ಮಾರ್ಕ್ಸ್ ರಸ್ತೆಗೆ ಬಿಎಂಟಿಸಿ ಬಸ್ ನಲ್ಲಿ ಪ್ರತೀನಿತ್ಯ ಪ್ರಯಾಣಿಸುತ್ತಾರೆ. ಮಂಗಳವಾರ ಸಂಜೆ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಪಾಸ್ ಖರೀದಿಸಲು ಹೋದಾಗ, ಉಚಿತ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಹೀಗಾಗಿ ಮುಂದಿನ 2-3 ದಿನಗಳವರೆಗೆ ಟಿಕೆಟ್‌ಗಳ ಖರೀದಿ ಮಾಡಿ ಪ್ರಯಾಣಿಸುವಂತೆ ಬಿಎಂಟಿಸಿ ಅಧಿಕಾರಿಗಳು ಸಲಹೆ ನೀಡಿದರು. ಇದರಿಂದ ಮಾಸಿಕ ಪಾಸ್‌ಗೆ ಖರ್ಚು ಮಾಡುತ್ತಿದ್ದ 1,050 ರೂ.ಗಳು ಉಳಿಯಲಿದೆ ಎಂದು ಹೇಳಿದ್ದಾರೆ.

ಯೋಜನೆಗಳ ಕುರಿತ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸಲ್ಲಿಸಿದ್ದು, ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆಂದು ಸಾರಿಗೆ ನಿಗಮದ ಮೂಲಗಳು ಮಾಹಿತಿ ನೀಡಿವೆ.

ಉಚಿತ ಪ್ರಯಾಣ ಯೋಜನೆಯಿಂದ ಸರ್ಕಾರಕ್ಕೆ 3,500 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತಾದರೂ, ಅಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ 4,200 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಸ್ ನಿಗಮಗಳ ಅಧಿಕಾರಿಗಳು ಸೂಚಿಸಿರುವ ಮೂರು ಆಯ್ಕೆಗಳಲ್ಲಿ ಒಂದನ್ನು ಸಿದ್ದರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ಅವರು ಆಯ್ಕೆ ಮಾಡಿ ಉಚಿತ ಪ್ರಯಾಣದ ಘೋಷಣೆ ಮಾಡುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com