ಬೆಂಗಳೂರು: ಒಂಟಿ ಮಹಿಳೆ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ 'ಕಿಂಗ್ ಕೊಹ್ಲಿ' ನೆರವು!

ಮಹಿಳೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಮತ್ತು ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿತ್ತು. ಮೇ 27 ರಂದು ಕೊಲೆ ನಡೆದಿದ್ದು, ತಡವಾಗಿ ವಿಷಯ ಬೆಳಕಿಗೆ ಬಂದಿತ್ತು. ಆದರೆ ಇದು ಕೊಲೆ ಎಂಬುದು ಮೇಲುನೋಟಕ್ಕೆ ತಿಳಿದರೂ ಪೊಲೀಸರಿಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ವೃದ್ದೆ ಕೊಲೆ  ಪ್ರಕರಣವನ್ನು ಭೇದಿಸಲು ಕಿಂಗ್ ಕೊಹ್ಲಿ ಎಂಬ ಫಲಕ ಸಹಾಯ ಮಾಡಿದೆ. ಕಮಲಾ ಎಂಬ ಮಹಿಳೆಯನ್ನು ಮೇ 27 ರಂದು ನಾಗಪುರದ ತನ್ನ ನಿವಾಸದಲ್ಲಿ ಕೊಲೆ ಮಾಡಲಾಗಿತ್ತು.

ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಮತ್ತು ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿತ್ತು. ಮೇ 27 ರಂದು ಕೊಲೆ ನಡೆದಿದ್ದು, ತಡವಾಗಿ ವಿಷಯ ಬೆಳಕಿಗೆ ಬಂದಿತ್ತು. ಆದರೆ ಇದು ಕೊಲೆ ಎಂಬುದು ಮೇಲುನೋಟಕ್ಕೆ ತಿಳಿದರೂ ಪೊಲೀಸರಿಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ.

ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರಿಗೆ 'ಕಿಂಗ್ ಕೊಹ್ಲಿ' ಎಂಬ ಹೆಸರು ಸಹಾಯ ಮಾಡಿದೆ. ಮೇ 27ರಂದು ಕಮಲಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಸಿದ್ದರಾಜು, ಅಶೋಕ್ ಮತ್ತು ಅಂಜನಾಮೂರ್ತಿ ಎಂಬ ಮೂವರು ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಬಂದು ಕೊಲೆ ಮಾಡಿದ್ದರು. ಬಳಿಕ ಮಹಿಳೆಯಿಂದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ಸ್ವಲ್ಪ ನಗದನ್ನು ಕದ್ದು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದಾಗ, ಆರಂಭದಲ್ಲಿ ಪೊಲೀಸರಿಗೆ ಯಾವುದೇ ಪುರಾವೆಗಳು ಸಿಗಲಿಲ್ಲ.

ಕೊಲೆಯಾದ ದಿನ ಅಂಜನಾಮೂರ್ತಿ ಎಂಬಾತ ಕಮಲಮ್ಮ ಅವರ ಮನೆ ಬಳಿ ಕಿಂಗ್ ಕೊಹ್ಲಿ ಎಂದು ಹಿಂದೆ ಬರೆದಿರುವ ಆಟೋದ ನಂಬರ್ ಪ್ಲೇಟ್ ತೆಗೆಸುತ್ತಿರುವುದು ಕಂಡು ಬಂದಿದೆ.  ಕಮಲಾ ಕೊಲೆ ಆರೋಪದ ಮೇಲೆ ಬೆಂಗಳೂರಿನ ನಿವಾಸಿಗಳಾದ ಅಶೋಕ್ (40), ಅಂಜನಮೂರ್ತಿ (33) ಮತ್ತು ಸಿದ್ದರಾಜು (34) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಅಶೋಕ್ ವೃತ್ತಿಯಲ್ಲಿ ಪ್ಲಂಬರ್. ಮೂರು ತಿಂಗಳ ಹಿಂದೆ ಸೋರುತ್ತಿರುವ ಪೈಪ್‌ಗಳನ್ನು ಸರಿಪಡಿಸಲು ಕಮಲಾ ಅವರ ಮನೆಗೆ ಹೋಗಿದ್ದ. ಈ ವೇಳೆ ಕಮಲಾ ಮನೆಯಲ್ಲಿ ಒಬ್ಬರೇ ವಾಸವಿದ್ದು, ಚಿನ್ನಾಭರಣ ಹಾಗೂ ನಗದು ಹಣವಿರುವುದನ್ನು ಅಶೋಕ್ ತಿಳಿದುಕೊಂಡಿದ್ದ. ಅಶೋಕ್, ಸಿದ್ದರಾಜು ಮತ್ತು ಅಂಜನಮೂರ್ತಿ ಜತೆ ಸೇರಿ ಸಾಲ ಮತ್ತು ಹಣದ ಅವಶ್ಯಕತೆ ಇದ್ದ ಕಾರಣ ದರೋಡೆಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಆಂಜನಮೂರ್ತಿ ಅವರ ಆಟೋದಲ್ಲಿ ಕಮಲಾ ಮನೆಗೆ ದರೋಡೆ ಮಾಡಲು ಭೇಟಿ ನೀಡಿದ್ದರು. ಮೊದಲ ಪ್ರಯತ್ನದಲ್ಲಿ, ಅವರು ಆಟೋ ನೋಂದಣಿ ಫಲಕವನ್ನು ತೆಗೆದುಹಾಕಿದರು. ಪ್ರದೇಶವು ಜನಸಂದಣಿಯಿಂದ ಕೂಡಿದ್ದರಿಂದ ಅವರು ಯೋಜನೆಯನ್ನು ಕೈಬಿಟ್ಟರು. ಎರಡನೇ ಯತ್ನದಲ್ಲಿ ಕಮಲಾ ಅವರಿಗೆ ಬಿಸ್ಕೆಟ್ ಸಂಗ್ರಹಿಸುವ ಗೋಡೌನ್ ಆಗಿ ಕಾರ್ ಶೆಡ್  ಬಾಡಿಗೆಗೆ ನೀಡುವಂತೆ ಮನವಿ ಮಾಡುವ ನೆಪದಲ್ಲಿ ಮನೆಗೆ ಹೋಗಿದ್ದಾರೆ. ಅವರು ಆಕೆಗೆ ಕೆಲವು ಬಿಸ್ಕತ್ತುಗಳನ್ನು ಸಹ ನೀಡಿದರು. ಅವರು ತಿನ್ನುತ್ತಿದ್ದಾಗ, ಕಮಲಾ ಅವರನ್ನು ಎಳೆದೊಯ್ದು, ಬಾಯಿ ಬಿಗಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಅಪರಾಧದ ದಿನದಂದು ಆರೋಪಿಗಳು ಬಳಸಿದ್ದ ‘ಕಿಂಗ್ ಕೊಹ್ಲಿ’ ಎಂದು ಬರೆದು ಆಟೋ ನಂಬರ್ ಪ್ಲೇಟ್ ಹಾಕಿದ್ದರು. "ತನಿಖೆಯ ಸಮಯದಲ್ಲಿ ನಾವು ಸಂಗ್ರಹಿಸಿದ ಈ ಸುಳಿವು ಮತ್ತು ಇತರ ಮಾಹಿತಿಯೊಂದಿಗೆ, ನಮ್ಮ ತಂಡವು ಆರೋಪಿಗಳನ್ನು ಬಂದಿಸಿತು. ಕೂಲಿ ಕೆಲಸ ಮಾಡುವ ಸಿದ್ದರಾಜು ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಅಪಾರ ಸಾಲ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಪೊಲೀಸರ ವಶದಲ್ಲಿದ್ದಾರೆ. ಈ ಮೂಲಕ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಿಂಗ್ ಕೊಹ್ಲಿ ಪೊಲೀಸರಿಗೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com