ಕೊಪ್ಪಳ: ಕಲುಷಿತ ನೀರು ಸೇವನೆಯಿಂದ ಮೃತರ ಸಂಖ್ಯೆ 3ಕ್ಕೆ ಏರಿಕೆ, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದ 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಗೆ ತುತ್ತಾಗಿದ್ದ ಬಾಲಕಿ ನಿರ್ಮಲಾ ಈರಪ್ಪ ಗುರುವಾರ ಸಾವನ್ನಪ್ಪಿದ್ದಾಳೆ. ಇದರೊಂದಿಗೆ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದ 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಗೆ ತುತ್ತಾಗಿದ್ದ ಬಾಲಕಿ ನಿರ್ಮಲಾ ಈರಪ್ಪ ಗುರುವಾರ ಸಾವನ್ನಪ್ಪಿದ್ದಾಳೆ. ಇದರೊಂದಿಗೆ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 

ಬುಧವಾರ ಸಂಜೆ  ತೀವ್ರ  ವಾಂತಿ ಮತ್ತು ಭೇದಿಯ ಲಕ್ಷಣ ಕಾಣಿಸಿಕೊಂಡು, ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಬಾಲಕಿಯನ್ನು ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಇದುವರೆಗೆ ಕಲುಷಿತ ನೀರು ಸೇವನೆಯಿಂದ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಮಲಾ ಅವರ ಪೋಷಕರು ಕೆಲಸದ ನಿಮಿತ್ತ ಕೇರಳಕ್ಕೆ ತೆರಳಿದ್ದು, ಆಕೆಯನ್ನು ಸಂಬಂಧಿಕರ ಮನೆಯಲ್ಲಿ ಬಿಡಲಾಗಿತ್ತು. ನಿರ್ಮಲಾಗೆ ತೀವ್ರತರವಾದ ವಾಂತಿ, ಭೇದಿ ಲಕ್ಷಣಗಳು ಕಾಣಿಸಿಕೊಂಡಾಗ ಸಂಬಂಧಿಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ, ಹೆಚ್ಚಿನ ರೋಗಿಗಳಿದ್ದ ಕಾರಣ ಬಾಲಕಿಯನ್ನು ಕುಷ್ಟಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಘಟನೆ ನಂತರ ಜಿಲ್ಲಾ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ.

ಈ ಸಂದರ್ಭದಲ್ಲ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಅಲಕಾನಂದ ಮಾಳಗಿ, ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ರೋಗಿಗಳ ರಕ್ತ ಪರೀಕ್ಷೆ ನಡೆಸಲು ಸೌಲಭ್ಯ ಕಲ್ಪಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ನೀರಿನ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ತಜ್ಞರ ಅಭಿಪ್ರಾಯದಿಂದ ಬಾಲಕಿಯ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಹೇಳಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗೆ ಕೊಳಚೆ ನೀರು ಸೇರಿಕೊಂಡು ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೂನ್ 5 ರಂದು ಜಿಲ್ಲೆಯ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂಬತ್ತು ತಿಂಗಳ ಹಸುಳೆ ಹಾಗೂ 60 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಸರಿಹಾಳ ಗ್ರಾಮದ ಶಾಲೆಗೆ ಅಧಿಕಾರಿಗಳು ಮೂರು ದಿನ ರಜೆ ಘೋಷಿಸಿದ್ದಾರೆ. ಗ್ರಾಮದಲ್ಲಿ ಕಾಲರಾ ಹರಡುವ ಭೀತಿಯಿದ್ದು, ಪರಿಸ್ಥಿತಿ ಗಂಭೀರವಾಗಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com