ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆ: ಜಿಎಸ್'ಟಿ, ಐಟಿ ಪಾವತಿಸುವವರಿಗಿಲ್ಲ ಲಾಭ, ಷರತ್ತು ವಿಧಿಸಿದ ಸರ್ಕಾರ!

ಚುನಾವಣೆಗೂ ಮುನ್ನ ಘೋಷಿಸಿದ್ದ ಗೃಹಲಕ್ಷ್ಮೀ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಯೋಜನೆಯ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚುನಾವಣೆಗೂ ಮುನ್ನ ಘೋಷಿಸಿದ್ದ ಗೃಹಲಕ್ಷ್ಮೀ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಯೋಜನೆಯ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದ್ದು, ‘ಗೃಹಲಕ್ಷ್ಮೀ’ ಅರ್ಜಿ ನಮೂನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರವಿರುವುದು ಕಂಡು ಬಂದಿದೆ.

ಇನ್ನು ಅರ್ಜಿಯಲ್ಲಿ ಮನೆಯ ಯಜಮಾನಿ ಪತಿಯ ದಾಖಲೆಗಳನ್ನು ಕೇಳಲಾಗಿದೆ. ಪತಿಯ ಆಧಾರ್ ಕಾರ್ಡ್ ವೋಟರ್ ಐಡಿ ದಾಖಲೆ ಕೂಡ ಅರ್ಜಿ ಸಲ್ಲಿಕೆ ವೇಳೆ ಅಗತ್ಯವಾಗಿದೆ.

ಅರ್ಜಿಯಲ್ಲಿ ಮೊದಲಿಗೆ ಹೆಸರು, ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿ, ಉದ್ಯೋಗ, ಪತಿಯ ಹೆಸರು, ಪತಿಯ ಆಧಾರ್ ಹಾಗೂ ವೋಟರ್ ಐಡಿ ಮುಂತಾದ ಮಾಹಿತಿಯನ್ನು ಕೇಳಲಾಗಿದೆ.

ಅದರೊಂದಿಗೆ ಜಾತಿ, ಆಧಾರ್ ಜತೆ ಲಿಂಕ್ ಆಗಿರುವ ಮೊಬೈಲ್ ನಂ. ಬ್ಯಾಂಕ್ ಖಾತೆ ಮಾಹಿತಿಯನ್ನು ನಮೂದಿಸಲು ಸ್ಥಳವನ್ನು ನೀಡಲಾಗಿದೆ.

ಈ ಅರ್ಜಿಯನ್ನು ತುಂಬಿ ಜೊತೆಗೆ, ಮನೆ ಯಜಮಾನಿ ಹಾಗೂ ಆಕೆಯ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ವೋಟರ್ ಐಡಿ ಪ್ರತಿಯನ್ನು ಲಗತ್ತಿಸಬೇಕು. ಅದರೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನೂ ಲಗತ್ತಿಸಬೇಕು.

ಕೊನೆಗೆ ಸ್ವಯಂ ಘೋಷಣೆ ಒಂದಕ್ಕೆ ಸಹಿ ಹಾಕಬೇಕಾಗಿದ್ದು, ಅದರಲ್ಲಿ ಮನೆಯೊಡತಿ, ನಾನು ಮತ್ತು ನನ್ನ ಪತಿಯು ಅದಾಯ ತೆರಿಗೆ/ ಜಿಎಸ್‌ಟಿ ಪಾವತಿದಾರರಾಗಿರುವುದಿಲ್ಲ. ನಾನು ಒದಗಿಸಿರುವ ಎಲ್ಲಾ ವಿವರಗಳು ನನ್ನ ತಿಳುವಳಿಕೆಯಂತೆ ಸಮರ್ಪಕವಾಗಿದೆ. ನನ್ನ ಕುಟುಂಬ ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ, ಸುಳ್ಳೆಂದು ಕಂಡು ಬಂದರೆ ಕಾನೂನಿನ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆಂದು ಈ ಮೂಲಕ ದೃಢೀಕರಿಸುತ್ತೇವೆ.” ಎಂಬ ಹೇಳಿಕೆಯನ್ನು ಒಪ್ಪಿ ಸಹಿ ಹಾಕಬೇಕಾಗಿರುತ್ತದೆ.

ಇದೇ ಮಾಹಿತಿಯನ್ನು ಆನ್ಲೈನ್ ಮೂಲಕ ಸಲ್ಲಿಸಿಯೂ ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಜೂ.15ರಂದು ಕಾರ್ಯಾರಂಭವಾಗಬೇಕಿದೆ.

ಯೋಜನೆಗಿರುವ ಷರತ್ತುಗಳೇನು?
ಗೃಹ ಲಕ್ಷ್ಮಿ ಯೋಜನೆ (ಕುಟುಂಬದ ಪ್ರತಿ ಮಹಿಳೆಗೆ ತಿಂಗಳಿಗೆ ರೂ 2,000) ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅದರಂತೆ, ಮಹಿಳೆ ಅಥವಾ ಆಕೆಯ ಪತಿ ಜಿಎಸ್'ಟಿ, ಐಟಿ ಪಾವತಿಸುತ್ತಿದ್ದರೆ ಯೋಜನೆಗೆ ಅರ್ಹರಾಗಿರುವುದಿಲ್ಲ. ಬಿಪಿಎಲ್/ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವ ಮಹಿಳೆಯರು ಯೋಜನೆಗೆ ಅರ್ಹರಾಗಿರುತ್ತಾರೆಂದು ತಿಳಿಸಲಾಗಿದೆ.

ಫಲಾನುಭವಿಯ ಹೆಸರನ್ನು ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ಗಳಲ್ಲಿ ಕುಟುಂಬದ ಮುಖ್ಯಸ್ಥ ಎಂದು ನಮೂದಿಸರಬೇಕು. ಈ ಕಾರ್ಡ್‌ಗಳಿಲ್ಲದ ಜನರು ಯೋಜನೆಗೆ ಅರ್ಹರಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿ ಸಿಗುವುದು ಸೊಸೆಗಲ್ಲ, ಅತ್ತೆಗೆ?: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಅರ್ಹ ಫಲಾನುಭವಿಗಳು ತಮ್ಮ ಅರ್ಜಿಗಳನ್ನು ಜೂನ್ 15 ರಿಂದ ಜುಲೈ 15 ರೊಳಗೆ ಸಲ್ಲಿಸಬಹುದಾಗಿದೆ. ಜುಲೈ 15 ರ ನಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಗಸ್ಟ್ 15 ರಂದು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಅಧಿಕೃತ ಏಜೆನ್ಸಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವೇಳೆ ಅರ್ಜಿದಾರರು ತಪ್ಪು ಮಾಹಿತಿ ನೀಡಿದ್ದೇ ಆದರೆ, ಸರ್ಕಾರ ನೀಡಿದ್ದ ಹಣವನ್ನು ವಾಪಸ್ ನೀಡಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಬ್ಯಾಂಕ್ ಖಾತೆಗಳನ್ನು ತಮ್ಮ ಆಧಾರ್‌ಗೆ ಲಿಂಕ್ ಮಾಡಿರಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com