ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆ ಪ್ರಕ್ರಿಯೆ ಆರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಸುಮ್ಮನಿರುವುದಿಲ್ಲ ಎಂಬ ಬಿಜೆಪಿಯ ಎಚ್ಚರಿಕೆ ನಡುವೆ, ಈಗಾಗಲೇ ಪಠ್ಯಪುಸ್ತಕಗಳ ಪರಿಷ್ಕರಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸರ್ಕಾರ ಗುರುವಾರ ಹೇಳಿದೆ
Published: 08th June 2023 10:17 PM | Last Updated: 08th June 2023 10:18 PM | A+A A-

ಮಧು ಬಂಗಾರಪ್ಪ
ಬೆಂಗಳೂರು: ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಸುಮ್ಮನಿರುವುದಿಲ್ಲ ಎಂಬ ಬಿಜೆಪಿಯ ಎಚ್ಚರಿಕೆ ನಡುವೆ, ಈಗಾಗಲೇ ಪಠ್ಯಪುಸ್ತಕಗಳ ಪರಿಷ್ಕರಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸರ್ಕಾರ ಗುರುವಾರ ಹೇಳಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅವೈಜ್ಞಾನಿಕ ಮತ್ತು ಸಂವಿಧಾನ ವಿರೋಧಿ ವಿಷಯವನ್ನು ಪರಿಷ್ಕರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರ ಪಠ್ಯಕ್ರಮದಲ್ಲಿ ಆಕ್ಷೇಪಾರ್ಹ ವಿಷಯ ಸೇರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆ ಅಂಶಗಳ ಪರಿಷ್ಕರಣೆ ಬಗ್ಗೆ ಚಿಂತಿಸಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಶಿಕ್ಷಣ ತಜ್ಞರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಲೇಖಕರು, ಸಾಹಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಕಲಿಸುವ ಪಠ್ಯಕ್ರಮ ವೈಜ್ಞಾನಿಕವಾಗಿರಬೇಕು, ಸಮಾಜಮುಖಿಯಾಗಬೇಕು ಎಂದು ಸಲಹೆ ನೀಡುತ್ತಿರುವ ತಜ್ಞರು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ನಂಟು ಹೊಂದಿಲ್ಲ ಎಂದರು.
''ಯುವ ಮನಸ್ಸುಗಳಿಗೆ ತಪ್ಪು ತಿಳಿವಳಿಕೆ ಮೂಡಿಸಬಾರದು ಎಂಬ ಕಾಳಜಿಯಿಂದ ಈ ಸಲಹೆ ನೀಡಲಾಗಿದೆ. ಪಠ್ಯಕ್ರಮದಲ್ಲಿ ಯಾವ ಅಂಶಗಳನ್ನು ಮುಂದುವರಿಸಬೇಕು, ಯಾವುದನ್ನು ಕೈಬಿಡಬೇಕು ಎಂಬ ಬಗ್ಗೆಯೂ ತಜ್ಞರು ತಮ್ಮ ಶಿಫಾರಸುಗಳನ್ನು ನೀಡಲಿದ್ದಾರೆ. ಅದನ್ನು ಆಧರಿಸಿ ಸರಕಾರ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದೆ ಎಂದು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ: ಮಕ್ಕಳ ಹಿತದೃಷ್ಟಿಯಿಂದ ಈ ವರ್ಷವೇ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ: ಸಚಿವ ಮಧು ಬಂಗಾರಪ್ಪ
"ಈಗಾಗಲೇ ಪಠ್ಯಪುಸ್ತಕಗಳು ಪ್ರಕಟಗೊಂಡು ಶಾಲೆಗಳಿಗೆ ತಲುಪಿರುವುದರಿಂದ ಪರಿಷ್ಕೃತ ಪಠ್ಯಕ್ರಮ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಬೋಧಿಸಲಾಗಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ.ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಮಕ್ಕಳ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುವುದು, ಇವು ಅತ್ಯಂತ ಸೂಕ್ಷ್ಮ ವಿಷಯಗಳಾಗಿವೆ. ಸಂಪುಟದಲ್ಲಿ ಚರ್ಚೆಯಾಗಬೇಕಿದೆ. ದೊಡ್ಡ ಮಟ್ಟದ ಚರ್ಚೆಯೂ ನಡೆಯಬೇಕಿದ್ದು, ಮಕ್ಕಳ ಮನಸ್ಸು, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ರಾಜ್ಯ ಪಠ್ಯಕ್ರಮ ಪರಿಷ್ಕರಿಸಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಪಾಠಗಳನ್ನು ಸೇರಿಸಿದೆ ಮತ್ತು ಬಲಪಂಥೀಯ ಚಿಂತಕರ ಪಠ್ಯಗಳನ್ನು ಸೇರಿಸಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಹಿಂದಿನ ಮೈಸೂರು ದೊರೆ ಟಿಪ್ಪು ಸುಲ್ತಾನ್‌ನ ವೈಭವೀಕರಣವನ್ನು ಬಿಜೆಪಿ ಸರ್ಕಾರ ಕೈಬಿಟ್ಟಿದೆ ಎಂದು ಅವರು ಹೇಳಿದರು.