ಪೊಲೀಸರು ವಿಭೂತಿ, ಕುಂಕುಮ ಹಚ್ಚಿಕೊಳ್ಳಬಾರದು ಎಂದು ಹೇಳಿಲ್ಲ: ಗೃಹ ಸಚಿವ ಪರಮೇಶ್ವರ್
ಪೊಲೀಸರು ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಳ್ಳಬಾರದು ಎಂದು ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದು, ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Published: 09th June 2023 10:09 AM | Last Updated: 09th June 2023 07:06 PM | A+A A-

ಗೃಹ ಸಚಿವ ಡಾ.ಜಿ.ಪರಮೇಶ್ವರ್.
ಬೆಂಗಳೂರು: ಪೊಲೀಸರು ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಳ್ಳಬಾರದು ಎಂದು ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದು, ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಬೊಟ್ಟು, ವಿಭೂತಿ ಇಟ್ಟುಕೊಳ್ಳಬಹುದು, ಅವರು ಯುನಿಫಾರ್ಮ್ ನಲ್ಲಿ ಕೆಲಸ ಮಾಡಬೇಕು. ಅವರಿಗೆ ಅವರದ್ದೇ ಆದ ಪೊಲೀಸ್ ರೂಲ್ಸ್ ಚೌಕಟ್ಟು ಇದೆ, ಅದರೊಳಗೆ ಏನೂ ಬೇಕಾದರೂ ಮಾಡಬಹುದು. ನಾನೂ ಏನನ್ನೂ ಸೂಚನೆ ನೀಡಿಲ್ಲ. ಸ್ಪಷ್ಟವಾಗಿ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ಮಾಡಿ ಎಂದಷ್ಟೇ ಹೇಳಿದ್ದೇನೆ ಎಂದು ಹೇಳಿದರು.
ಯಾರು ಈ ರೀತಿಯಾಗಿ ಸುದ್ದಿ ಬರೆದಿದ್ದಾರೋ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾವು ಹೇಳದೆ ಇರುವುದನ್ನೆಲ್ಲ ಪತ್ರಿಕೆಯಲ್ಲಿ ಪ್ರಕಟನೆ ಮಾಡಿ, ಗೊಂದಲ ಸೃಷ್ಟಿ ಮಾಡುವುದು ಶಾಂತಿ ಕಡದಲು ಕಾರಣವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಜಿ. ಪರಮೇಶ್ವರ್
ಇದೇ ವೇಳೆ ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಕಿತ್ತೊಗೆಯುವುದು ನನ್ನ ಆದ್ಯತೆ ಎಂದು ಹೇಳಿದರು.
ನೈತಿಕ ಪೋಲೀಸ್ ಗಿರಿ ಮಾತ್ರವಲ್ಲ, ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಕಿತ್ತೊಗೆಯುವುದು ನಮ್ಮ ಆದ್ಯತೆಯಾಗಿದೆ. ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗ ವಿಧಾನಸಭೆ ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಪೊಲೀಸರು ರೌಡಿಗಳಿಗೆ ಕಡಿವಾಣ ಹಾಕಿ, ಡ್ರಗ್ಸ್, ಜೂಜಾಟವನ್ನು ಕೊನೆಗೊಳಿಸದ ಹೊರತು ರಾಜ್ಯದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಸಾಮಾಜಿಕ ಆರ್ಥಿಕ ಸಮೀಕ್ಷೆಯ ವರದಿ ಸ್ವೀಕರಿಸುವ ಸರ್ಕಾರ ನಿರ್ಧಾರದ ಕುರಿತು ಪ್ರತಿಕ್ರಿಯಿಸಿ, ವರದಿ ಸಿದ್ಧಪಡಿಸಲು ರೂ.162 ಕೋಟಿ ಖರ್ಚು ಮಾಡಲಾಗಿದೆ. ಮುಖ್ಯಮಂತ್ರಿಗಳ ನಿರ್ಧಾರವನ್ನು ಸ್ವಾಗತಿಸುತ್ತೇನೆಂದು ಹೇಳಿದರು.