ಬೆಳಗಾವಿ: ಟಿಪ್ಪು ಸುಲ್ತಾನ್, ಔರಂಗಜೇಬ್‌ನನ್ನು ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾರಿಡ ಪೋಸ್ಟ್'ವೊಂದು ಕೊಲ್ಲಾಪುರದಲ್ಲಿ ಹಿಂಸಾಚಾರ ಸೃಷ್ಟಿಯಾಗುವಂತೆ ಮಾಡಿದ್ದು, ಇದರ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ನಿಪಾಣಿಯಲ್ಲಿಯೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಬೆಳಗಾವಿ ಜಿಲ್ಲಾ ಪೊಲೀಸರು ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಭೆ ನಡೆಸಿದ್ದಾರೆ.
ಈ ನಡುವೆ ವಿವಾದಾತ್ಮಕ ವಾಟ್ಸಾಪ್ ಸ್ಟೇಟರ್ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ನಿಪಾಣಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಘಟನೆ ಸಂಬಂಧ ಮಹಾರಾಷ್ಟ್ರ ಪೊಲೀಸರು ಕೂಡ 36 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.
ಕೊಲ್ಹಾಪುರ ಜಿಲ್ಲೆಗೆ ನಿಪಾಣಿ ಹೆಚ್ಚು ಸಂಪರ್ಕ ಹೊಂದಿರುವ ಪಟ್ಟಣವಾಗಿದ್ದು, ಕಳೆದೆರಡು ದಿನಗಳಿಂಗ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕರೆ ನೀಡಿದ್ದಾರೆ.
ಪೊಲೀಸರು ಬಿಗಿ ಭದ್ರತೆಯನ್ನು ನಿಯೋಜಿಸಿರುವ ಹಿನ್ನೆಲೆಯಲ್ಲಿ ನಿಪ್ಪಾಣಿಯ ನಿವಾಸಿಗಳು ನಿಧಾನಗತಿಯಲ್ಲಿ ವ್ಯಾಪಾರ ವಹಿವಾಟುಗಳನ್ನು ಪುನರರಾರಂಭಿಸುತ್ತಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ, ಎಸ್ಪಿ ಸಂಜೀವ್ ಪಾಟೀಲ್ ಅವರು, ಬುಧವಾರ ರಾತ್ರಿ ನಿಪಾಣಿ ಬೀದಿಗಳಲ್ಲಿ ಕಾಲ್ನಡಿಗೆ ಮತ್ತು ವಾಹನ ಗಸ್ತುಗಳನ್ನು ಹೆಚ್ಚಿಸಿದ್ದಾರೆ. ಅಲ್ಲದೆ, ಎಲ್ಲಾ 32 ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಎಲ್ಲಾ ಸಮುದಾಯ, ಜಾತಿ, ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನಿಸಿ ಶಾಂತಿ ಸಭೆ ನಡೆಸುವಂತೆ ಸೂಚಿಸಿದ್ದಾರೆ.
ಜೊತೆಗೆ ನಿಪ್ಪಾಣಿಯಲ್ಲಿ ಸ್ವತಃ ಶಾಂತಿ ಸಭೆಯನ್ನು ಬುಧವಾರ ನಡೆಸಿದ್ದಾರೆ. ಸಭೆಯಲ್ಲಿ ಇತರ ಸಮುದಾಯಗಳನ್ನು ಕೆರಳಿಸುವಂತಹ ಕೋಮು ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಅಂತಹ ಪೋಸ್ಟ್‌ಗಳ ಬಗ್ಗೆ ವಿವಾದ ಸೃಷ್ಟಿಸುವ ಬದಲು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೂಡಲೇ ವರದಿ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ನಿಪ್ಪಾಣಿ ಸೇರಿದಂದೆ ಗಡಿ ಪ್ರದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಜನ ನಿತ್ಯದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡದಂತೆ ಯುವಕರಿಗೆ ಮನವಿ ಮಾಡಿದ್ದೇವೆ. ಈ ರೀತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಜೀವ್ ಪಾಟೀಲ್ ಎಚ್ಚರಿಸಿದ್ದಾರೆ.
Advertisement