ಕಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಸರ್ಕಾರ ಮುಂದು

ಕಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ

ಬೆಂಗಳೂರು: ಕಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಮುಖ್ಯಮಂತ್ರಿ ಸಿದ‍್ಧರಾಮಯ್ಯ ಸೂಚಿಸಿದ್ದಾರೆ. ಯಾರಿಗೆಲ್ಲ ಸರ್ಕಾರಿ ಭೂಮಿ ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಲು ಸೂಚಿಸಿದ್ದಾರೆ. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೆಐಎಡಿಬಿಯಿಂದ ಜಮೀನು ನೀಡಿದ್ದಾರೆ. ತರಾತುರಿಯ ತೀರ್ಮಾನಗಳ ಬಗ್ಗೆ ಮರು ಪರಿಶೀಲನೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.

2022ರ ಡಿಸೆಂಬರ್‌ನಿಂದ ಆಗಿರುವ ಎಲ್ಲ ಭೂ ಮಂಜೂರಾತಿಗಳ ಪರಿಶೀಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅಂತಹ ಭೂ ಮಂಜೂರಾತಿಯಿಂದ ಸಮಾಜಕ್ಕೆ ಪ್ರಯೋಜನವಾಗಿದೆಯೇ ಅಥವಾ ಈ ಅನುದಾನವು ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಈ ಮಾನದಂಡಗಳೊಂದಿಗೆ ಪರಿಶಲೀನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿ ಆಧಾರಿತ ಸಂಘಟನೆಯನ್ನು ಗುರಿಯಾಗಿಸುವುದಿಲ್ಲ. ಭೂ ಮಂಜೂರಾತಿ ನೈಜವಾಗಿದ್ದರೆ, ಸಂಸ್ಥೆಗಳು ನೈಜವಾಗಿದ್ದರೆ ಮತ್ತು ಜನರ ಹಿತಾಸಕ್ತಿ ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದರೆ, ಅಂತಹ ನಿರ್ಧಾರಗಳನ್ನು ಸರ್ಕಾರ ಖಂಡಿತವಾಗಿ ಗೌರವಿಸುತ್ತೇವೆಂದು ಹೇಳಿದರು.

ಇದೇ ವೇಳೆ ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿದ ಅವರು, ಯೋಜನೆಯಡಿ ಫಲಾನುಭವಿಗಳಾಗಲು ಅರ್ಜಿಗಳನ್ನು ನಾಡ ಕಚೇರಿ, ಬಾಪೂಜೀ ಸೇವಾ ಕೇಂದ್ರ, ಬೆಂಗಳೂರು ಒನ್ ಕೇಂದ್ರ, ಡಿಜಿಟಲ್ ಸರ್ವಿಸ್ ಸೆಂಟರ್, ಸೇವಾ ಕೇಂದ್ರ ಮೊದಲಾದ ಕಡೆಗಳಲ್ಲಿ ಸಲ್ಲಿಸಬಹುದು. ಅದಕ್ಕೂ ಮುಖ್ಯವಾಗಿ ಸರ್ಕಾರದ ಇ-ಗವರ್ನೆನ್ಸ್ ಇಲಾಖೆ ಒಂದು ಆ್ಯಪ್ ಅನ್ನು ಕೆಲ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, ಅದರ ಮೂಲಕ ಮಹಿಳೆಯರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com