ಪತಿ ವಿರುದ್ಧ ಅತ್ಯಾಚಾರ ಆರೋಪ; ವಿವಾಹದ ಮರುದಿನವೇ ಸಂಬಂಧ ಮುರಿದುಕೊಂಡ ಪತ್ನಿ; ವಿಚಾರಣೆಗೆ ಹೈಕೋರ್ಟ್ ತಡೆ

ಪ್ರೀತಿಸಿ ವಿವಾಹವಾದ ಮರುದಿನವೇ ಸಂಬಂಧ ಮುರಿದುಕೊಂಡ ಪತ್ನಿಯೊಬ್ಬಳು ಪತಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು, ಪ್ರಕರಣ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರೀತಿಸಿ ವಿವಾಹವಾದ ಮರುದಿನವೇ ಸಂಬಂಧ ಮುರಿದುಕೊಂಡ ಪತ್ನಿಯೊಬ್ಬಳು ಪತಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು, ಪ್ರಕರಣ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅರ್ಜಿದಾರರು (ಪತಿ) ಮತ್ತು ಪ್ರತಿವಾದಿಯಾಗಿರುವ (ಪತ್ನಿ) ಸಿಲಿಕಾನ್ ಹೋಂಡಾ ಎಂಬಲ್ಲಿ ಸಹೋದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿದ್ದು, ಕೆಲ ವರ್ಷಗಳಿಂದ ಒಬ್ಬರೊನ್ನೊಬ್ಬರು ಪ್ರೀತಿಸುತ್ತಿದ್ದರು. ಇದರ ಮುಂದುವರೆದ ಭಾಗವಾಗಿ 2023 ರ ಜನವರಿ 27 ರಂದು ಸುಮಾರು 100 ಮಂದಿಯೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅಲ್ಲದೆ, ಮರು ದಿನವೇ ಮಲ್ಲೇಶ್ವರದ ಉಪ ನೋಂದಣಾಧಿಕಾರಿಗಳ ಮುಂದೆ ದಂಪತಿ ಹಾಜರಾಗಿ ತಮ್ಮ ವಿವಾಹವನ್ನು ನೋಂದಣಿ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ ಪತ್ನಿಯ ಜನ್ಮ ದಿನವನ್ನು ಪತಿಯ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಈ ವೇಳೆ ಪತ್ನಿಯ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಪರಿಶೀಲಿಸಿದ್ದ ಪತಿಗೆ ವಿವಾಹಕ್ಕೂ ಮುನ್ನ ಆಕೆಗೆ ಇದ್ದಂತಹ ಅಕ್ರಮ ಸಂಬಂಧ ಮತ್ತು ಅದನ್ನು ಮುಂದುವರೆಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.

ಇದೇ ಕಾರಣಕ್ಕೆ ಇಬ್ಬರ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿದೆ, ಮತ್ತೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅದನ್ನು ಮುಂದುವರೆಸುತ್ತಿದ್ದಿಯಾ, ಏಕೆ ನನ್ನನ್ನು ಮದುವೆಯಾದೆ, ನನ್ನ ಜೀವನವನ್ನು ಹಾಳು ಮಾಡಿದ್ದೀಯ ಎಂದು ಪತಿ ಗಲಾಟೆ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಪತ್ನಿ, ಗಂಡನ ಮನೆಯಿಂದ ಹೊರ ನಡೆದು, ವೈವಾಹಿಕ ಸಂಬಂಧವನ್ನು ಅಂತಿಮಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.

ಈ ಘಟನೆ ನಡೆದ 32 ದಿನಗಳ ಕಾಲ ದೂರ ಇದ್ದ ಪತ್ನಿ, ಪತಿ ಮತ್ತವರ ಮನೆಯವರ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್​ ಠಾಣೆಗೆ ದೌರ್ಜನ್ಯ ಮತ್ತು ಪತಿಯ ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದರು. ಅಲ್ಲದೇ, ವಿವಾಹವಾದ ದಿನ ನಾನು ನಶೆಯಲ್ಲಿದ್ದೆ, ಏನು ನಡೆಯಿತು ಎಂಬುದು ಗೊತ್ತಾಗಿಲ್ಲ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಯಾವುದಕ್ಕಾಗಿ ಸಹಿ ಮಾಡಿದ್ದೇನೆ ಎಂಬುದು ಈವರೆಗೂ ನೆನಪಿಲ್ಲ. ನನ್ನ ವಿವಾಹಪೂರ್ವ ಸಂಬಂಧವನ್ನು ತಿಳಿದು ಪತಿ ಚಿತ್ರ ಹಿಂಸೆ ನೀಡಿದ್ದಾರೆ. ನಮ್ಮ ನಡುವೆ ವಿವಾಹವಾಗಿದ್ದು, ಮದುವೆಯ ನಂತರ ನಡೆದಿರುವ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮಾನವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಕೋರಿದ್ದರು.

ಇದರಂತೆ ತಮ್ಮ ವಿರುದ್ಧ ದಾಖಲಾಗಿರುವ ದೂರು ರದ್ದುಗೊಳಿಸುವಂತೆ ಕೋರಿ ಮಹಿಳೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣ ಸಂಬಂಧ ನಗರದ ವೈಯ್ಯಾಲಿ ಕಾವಲ್‌ನಲ್ಲಿ ದಾಖಲಾಗಿದ್ದು, ದೂರು ಮತ್ತು ಆದರ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.

ಪ್ರಕರಣ ಸಾರಾಂಶ ಪರಿಶೀಲಿಸಿದ ನ್ಯಾಯಪೀಠ, ದೂರುದಾರರು ವಿವಾಹವಾದ ದಿನ, ವಿವಾಹ ನೊಂದಣಿ ದಿನದ ಛಾಚಾಚಿತ್ರಗಳಲ್ಲಿ ಸ್ವಂತ ಇಚ್ಚೆಯಿಂದ ಮದುವೆಯಾಗಿದ್ದಾರೆ ಎಂಬ ಅಂಶ ಗೊತ್ತಾಗುತ್ತದೆ. ಆದರೆ, ಕಾನೂನುನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಜೊತೆಗೆ, ವಿವಾಹವಾಗಿ ಕೆಲದಿನಗಳ ಬಳಿಕ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಅಲ್ಲದೇ, ಮದುವೆಗೆ ಹಾಜರಿದ್ದ ಪತಿ ಕುಟುಂಬದವರ ವಿರುದ್ಧವೂ ದೂರು ಸಲ್ಲಿಸಿ ಅಪರಾಧದ ಆರೋಪದಲ್ಲಿ ಎಳೆಯಲಾಗುತ್ತಿದೆ ಅಂಶ ತಿಳಿಯಲಾಗುತ್ತದೆ. ಹೀಗಾಗಿ ಅರ್ಜಿಯ ಇತ್ಯರ್ಥವಾಗುವವರೆಗೂ ಪ್ರಕರಣದ ತನಿಖೆ ಮತ್ತು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com