ಕಾರವಾರ: ಅಂಕೋಲಾದ ಪ್ರಸಿದ್ಧ ಇಶಾಡು ಮಾವಿಗೆ ಜಿಐ ಟ್ಯಾಗ್ (ಭೌಗೋಳಿಕ ಗುರುತು) ಲಭ್ಯವಾಗಿದೆ.
ಇದರೊಂದಿಗೆ ಅಲ್ಫೋನ್ಸೋ ಮಾವಿನ ಹಣ್ಣಿನಂತೆಯೇ ಅಂತರಾಷ್ಟ್ರೀಯ ಮನ್ನಣೆಯೊಂದಿಗೆ ಇಶಾಡು ಮಾವು ಕೂಡ ತನ್ನ ಪ್ರಯಾಣವನ್ನು ಆರಂಭಿಸಿದೆ.
ಹುಳಿಯನ್ನು ತಿರಸ್ಕರಿಸಿ ಸಿಹಿಯ ತಿರುಳನ್ನಷ್ಟೇ ಕವಚದೊಳಗೆ ತುಂಬಿಕೊಂಡಿರುವ ಅಂಕೋಲಾ ಇಶಾಡು ಹಣ್ಣಿನ ಸವಿಯನ್ನು ತಿಂದೇ ಅನುಭವಿಸಬೇಕು. ಹಸಿರು–ಹಳದಿ ಮಿಶ್ರಿತ ಬಣ್ಣ ಹೊದ್ದುಕೊಂಡ ಈ ಹಣ್ಣುಗಳನ್ನು ಹಾಲಕ್ಕಿ ಮಹಿಳೆಯರು ಬಿದಿರು ಬುಟ್ಟಿಯಲ್ಲಿಟ್ಟು ಮಾರುತ್ತಾರೆ.
ಐಷಾರಾಮಿ ಕಾರುಗಳಲ್ಲಿ ಹೆದ್ದಾರಿಯಲ್ಲಿ ಹೋಗುವವರೂ ಇಶಾಡಿನ ಸುವಾಸನೆಗೆ ಮಾರುಹೋಗಿ, ಬ್ರೇಕ್ ಹಾಕಿ, ಇಡೀ ಬುಟ್ಟಿಯ ಹಣ್ಣನ್ನು ಖರೀದಿಸಿ ಕಾರಿನಲ್ಲಿ ತುಂಬಿಕೊಂಡು ಹೋಗುವುದೂ ಉಂಟು.
ಹಣ್ಣಿಗೆ ಜಿಐ ಮಾನ್ಯತೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ವಿಶೇಷತೆಯನ್ನು ಈ ಹಣ್ಣು ಜಗತ್ತಿಗೆ ವಿಸ್ತರಿಸಲಿದೆ. ಮರಕ್ಕೆ ಮಾನ್ಯತೆ ದೊರೆತಿರುವುದರಿಂದ ಮರಗಳನ್ನು ನೋಡುವ ರೀತಿ ಬದಲಾಗಲಿದೆ. ನಿರ್ಮಾಣದ ನೆಪದಲ್ಲಿ ಬರಿದಾಗುತ್ತಿರುವ ಕರಾವಳಿಯನ್ನು ಪರಿಸರಸ್ನೇಹಿಯಾಗಿ ಕಾಣಲು ಇದೊಂದು ಒಳ್ಳೆಯ ಅಸ್ತ್ರ ಆಗಬೇಕಿದೆ.
ಹಣ್ಣನ್ನು ಈ ಹಿಂದೆ ಡಬ್ಬಿಯಲ್ಲಿಟ್ಟು ರಫ್ತು ಮಾಡಲಾಗಿತ್ತು. ಹಣ್ಣಿಗೆ ಜಿಐ ಟ್ಯಾಗ್ ಲಭ್ಯವಾಗಿರುವ ಹಿನ್ನೆಲೆಯಲ್ಲಿ ವೈಭವ ಮರುಕಳಿಸುವ ಭರವಸೆಗಳಿವೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸತೀಶ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಇದು ವಿಶ್ವದ ಅತಿ ದುಬಾರಿ ಮಾವು, ಬೆಲೆ ಎಷ್ಟು ಬಲ್ಲಿರಾ?
ಅಂಕೋಲಾದ ಮಾತಾ ತೋಟಗಾರ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ (ಎಂಟಿಎಫ್‌ಪಿಸಿ) ಲಿಮಿಟೆಡ್ 2022ರ ಮಾರ್ಚ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿತ್ತು. ಚೆನ್ನೈನಲ್ಲಿರುವ ಜಿಯೋ ಇಂಡಿಕೇಟರ್ ಸ್ಪೆಸೀಸ್'ನ ನಿರ್ದೇಶಾನಲಯಕ್ಕೂ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಅವರು ಮತ್ತಷ್ಟು ದಾಖಲೆಗಳ ನೀಡುವಂತೆ ಸೂಚಿಸಿದ್ದರು. ದಾಖಲೆಗಳ ನೀಡಿದ ಬಳಿಕ ಅಂತಿಮವಾಗಿ ಹಣ್ಣಿಗೆ ಜಿಐ ಮಾನ್ಯತೆ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಎಂಟಿಎಫ್‌ಪಿಸಿ ನಿರ್ದೇಶಕ ಮಾಧವ ಇಂದ್ರಗೌಡ ಮಾತನಾಡಿ, ಕಳೆದ 400 ವರ್ಷಗಳಿಂದ ಈ ಮಾವಿನ ತಳಿಯನ್ನು ಬೆಳೆಯಲಾಗುತ್ತಿದೆ. ಇದೀಗ ಹಣ್ಣಿಗೆ ಜಿಐ ಟ್ಯಾಗ್ ದೊರೆತಿದ್ದು, 300 ರೈತರ ಸಂಘಟನೆಯಾದ ಎಂಟಿಎಫ್‌ಪಿಸಿ ಈ ಸಸಿಗಳನ್ನು ಪ್ರಚಾರ ಮಾಡಲು ಮತ್ತು ಈ ವಿಶೇಷ ಮಾವಿನ ಕೃಷಿಯನ್ನು ಪ್ರೋತ್ಸಾಹಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಏನಿದು ಜಿಯೋ ಟ್ಯಾಗ್?
ದೇಶದ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ನೀಡಿ, ಅದರ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಒಂದು ಭಾಗ ಈ ಪ್ರಮಾಣಪತ್ರವನ್ನು ನೀಡುತ್ತದೆ.
ಪ್ರಮಾಣಪತ್ರ ನೀಡುವುದಕ್ಕೂ ಪೂರ್ವದಲ್ಲಿ ಸಾಕಷ್ಟು ಹಿನ್ನೆಲೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಇದೂವರೆಗೆ ಕರ್ನಾಟಕದ ಕೆಲವೇ ಉತ್ಪನ್ನಗಳಿಗೆ ಮಾತ್ರ ಈ ಮಾನ್ಯತೆ ಲಭಿಸಿದೆ. ಶಿರಸಿಯ ಅಡಕೆಗೆ, ಸಾಗರದಲ್ಲಿ ಅಪ್ಪೆಮಿಡಿಗೆ ಜಿಯೋ ಟ್ಯಾಗಿಂಗ್ ಲಭ್ಯವಾಗಿದೆ
Advertisement