ಕೊಡಗು ಅರಣ್ಯಾಧಿಕಾರಿಗಳಿಂದ ಅಕ್ರಮವಾಗಿ ಮರ ಕಡಿದ ಆಂಧ್ರದ ರಿಯಲ್ಟರ್ ಗಳ ವಿರುದ್ಧ ಕೇಸ್
ಮಡಿಕೇರಿಯಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದ ಆಂಧ್ರ ಪ್ರದೇಶದ ಮೂವರು ರಿಯಲ್ ಎಸ್ಟೇಟ್ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.
Published: 13th June 2023 08:58 PM | Last Updated: 13th June 2023 08:58 PM | A+A A-

ಸಾಂದರ್ಭಿಕ ಚಿತ್ರ
ಮಡಿಕೇರಿ: ಮಡಿಕೇರಿಯಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದ ಆಂಧ್ರ ಪ್ರದೇಶದ ಮೂವರು ರಿಯಲ್ ಎಸ್ಟೇಟ್ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.
ರಿಯಲ್ಟರ್ ಗಳ ವಿರುದ್ಧ ನಿವೃತ್ತ ಏರ್ ಮಾರ್ಷಲ್ ಕೆಸಿ ಕಾರಿಯಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಮಂಗಳಾದೇವಿ ನಗರದಲ್ಲಿ ಭೂಕುಸಿತ ಸಂಭವಿಸುವ ಅಪಾಯವಿರುವ 38.5 ಎಕರೆ ಪ್ರದೇಶದಲ್ಲಿ 80ಕ್ಕೂ ಹೆಚ್ಚು ಮರಗಳನ್ನು ರೆಸಾರ್ಟ್ ನಿರ್ಮಾಣಕ್ಕಾಗಿ ರಿಯಲ್ ಎಸ್ಟೇಟ್ ಮಾಲೀಕರು ಕಡಿದು ಹಾಕಿದ್ದಾರೆ.
ಇದನ್ನು ಓದಿ: ಕೊಡಗು: ಖಾಸಗಿ ಬಸ್ ಗಳ ಆದಾಯಕ್ಕೆ ನಿಶ್ಯಕ್ತಿಯಾಗಿ ಪರಿಣಮಿಸಿದ ಶಕ್ತಿ ಯೋಜನೆ!
ರಿಯಲ್ಟರ್ ಗಳು ಮರ ಕಡಿಯಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ.
ಮಂಗಳಾದೇವಿ ನಗರದಲ್ಲಿ 18.95 ಎಕರೆ ವಿಸ್ತೀರ್ಣದ ಸರ್ವೆ ನಂಬರ್ 540/73ರ ಜಮೀನು ಆಂಧ್ರಪ್ರದೇಶ ಮೂಲದ ಎಸ್.ಅಪ್ಪಾರಾವ್ ಅವರ ಒಡೆತನದಲ್ಲಿದೆ.
ಸರ್ವೆ ಸಂಖ್ಯೆ 543/74ರಲ್ಲಿ 19.01 ಎಕರೆ ವಿಸ್ತೀರ್ಣದ ಜಮೀನು ಆಂಧ್ರ ಪ್ರದೇಶ ಮೂಲದ ಮತ್ತೊಬ್ಬ ವ್ಯಕ್ತಿ ಎಸ್.ಸುಬ್ಬಯ್ಯಮ್ಮ ಅವರ ಹೆಸರಿನಲ್ಲಿದೆ. ಈ ಇಬ್ಬರು ಭೂಮಾಲೀಕರು 2017ರಲ್ಲಿ ಕೃಷಿ ಭೂಮಿಯನ್ನು ವಸತಿಗಾಗಿ ಪರಿವರ್ತಿಸಿದ್ದರು.
2018 ರಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದಲ್ಲಿ, ಭೂಕುಸಿತದಿಂದ ಮಂಗಳಾದೇವಿ ನಗರದಾದ್ಯಂತ ಹಲವಾರು ಮನೆಗಳಿಗೆ ಹಾನಿಯಾಗಿತ್ತು ಮತ್ತು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ನಂತರ ಈ ಇದನ್ನು ಅಪಾಯಕಾರಿ ಸ್ಥಳ ಎಂದು ಘೋಷಿಸಲಾಗಿತ್ತು.
ಈ ಅಪಾಯಕಾರಿ ಸ್ಥಳದಲ್ಲಿನ ಮರಗಳನ್ನು ಕಡಿದ ಇಬ್ಬರು ಭೂಮಾಲೀಕರ ವಿರುದ್ಧ ಮಡಿಕೇರಿ ವಿಭಾಗದ ಅರಣ್ಯ ಇಲಾಖೆಯು ಇದೀಗ ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ 1976 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.