ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ನಿರ್ಧಾರಕ್ಕೂ ಮುನ್ನ ಮಾಹಿತಿ ನೀಡಿ; ಬಿಜೆಪಿ ಆಗ್ರಹ
ಶಾಲಾ ಪಠ್ಯಪುಸ್ತಕಗಳಲ್ಲಿ ಬದಲಾವಣೆ ತರಲು ರಾಜ್ಯ ಸರಕಾರ ಮುಂದಾಗಿದೆ. ಬದಲಾವಣೆ ಮಾಡುವುದೇ ಆದರೆ, ಸಾರ್ವಜನಿಕವಾಗಿ ಮಾಹಿತಿ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ.
Published: 15th June 2023 08:46 AM | Last Updated: 16th June 2023 02:03 PM | A+A A-

ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವರು.
ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಬದಲಾವಣೆ ತರಲು ರಾಜ್ಯ ಸರಕಾರ ಮುಂದಾಗಿದೆ. ಬದಲಾವಣೆ ಮಾಡುವುದೇ ಆದರೆ, ಸಾರ್ವಜನಿಕವಾಗಿ ಮಾಹಿತಿ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರಗಳ ಅವಧಿಯ ಎಲ್ಲ ಮಾಜಿ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೇಲ್ಮನೆ ಸದಸ್ಯರಾಗಿ ಕೆಲಸ ಮಾಡುತ್ತಿರುವ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಶಾಲಾ ಪಠ್ಯಪುಸ್ತಕಗಳಲ್ಲಿ ಬದಲಾವಣೆ ತರಲು ರಾಜ್ಯ ಸರಕಾರ ಹವಣಿಸುತ್ತಿದೆ. ಒಂದು ವೇಳೆ ಬದಲಾವಣೆಗಳನ್ನು ಮಾಡುತ್ತಿದ್ದರೆ, ನಿರ್ಧಾರಕ್ಕೂ ಮುನ್ನ ಎಲ್ಲಾ ವಿವರಗಳನ್ನು ಸಾರ್ವಜನಿಕಗೊಳಿಸಿ. ತಜ್ಞರಿಂದ ಅಭಿಪ್ರಾಯಗಳನ್ನು ಪಡೆಯಿರಿ ಎಂದು ಹೇಳಿದರು.
ಇದನ್ನೂ ಓದಿ: ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಗಳನ್ನು ಕಿರುಪುಸ್ತಕಗಳ ಮೂಲಕ ತಿಳಿಸಲಾಗುವುದು: ಮಧು ಬಂಗಾರಪ್ಪ
ದ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ. ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್) ನಿರ್ದೇಶನದಂತೆ ಪಠ್ಯಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ತಪ್ಪುಗಳನ್ನು ಸರಿಪಡಿಸುವ ಉದ್ದೇಶ ನಮ್ಮದಾಗಿತ್ತು. ಈಗ ದ್ವೇಷದಿಂದ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಪೋಷಕರ ಗಮನಕ್ಕೆ ತಂದು ಮಾಡಬೇಕು ಎಂದು ಒತ್ತಾಯಿಸಿದರು.
ಸಿ.ಟಿ.ರವಿ ಮಾತನಾಡಿ, ಕೆಲವು ಮಹನೀಯರ ಪಾಠವನ್ನು ಕೈಬಿಡಬೇಕು ಎಂಬ ಹೇಳಿಕೆ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ. ಕಾಂಗ್ರೆಸ್ ಸರಕಾರ ರಾಜಕೀಯ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಮಗ್ರವಾಗಿ ಅವಲೋಕಿಸದೆ ಮಾತನಾಡುತ್ತಿದೆ. ಶಿಕ್ಷಣ ಕ್ಷೇತ್ರವು ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಹೊರಬರಬೇಕು. ಉತ್ತಮ ನಾಗರಿಕರನ್ನು ಶಿಕ್ಷಣ ತಯಾರು ಮಾಡಬೇಕು. ಸಮಾನ ಮನಸ್ಕರ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಅದರ ಬಳಿಕ ಮುಂದಿನ ರೂಪರೇಷೆ ನಿರ್ಧರಿಸಲಾಗುತ್ತದೆ ಎಂದರು.