ಮತಾಂತರ ತಡೆ, ಎಪಿಎಂಸಿ ಕಾಯ್ದೆ ರದ್ಧತಿಗೆ ಸರ್ಕಾರ ನಿರ್ಧಾರ?

ಮತಾಂತರ ತಡೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ತಿದ್ದುಪಡಿಗಳ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮತಾಂತರ ತಡೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ತಿದ್ದುಪಡಿಗಳ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ, ಮತಾಂತರ ತಡೆ ಹಾಗೂ ಎಪಿಎಂಸಿ ಕಾಯ್ದೆ ಕುರಿತು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಇದರ ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಸೇರಿದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವ ‘ಅನ್ನ ಭಾಗ್ಯ’ ಯೋಜನೆ ಜಾರಿಗೆ ತರಲು ಇತರ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಸ್ತಾವನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇವು ನಮ್ಮ ಪ್ರಣಾಳಿಕೆಯ ಭಾಗವಾಗಿದ್ದವು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಅಂಗೀಕರಿಸಿದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯ್ದೆಗೆ ಮಾಡಿದ ತಿದ್ದುಪಡಿಗಳನ್ನು ತೆಗೆದುಹಾಕುತ್ತಿದ್ದೇವೆ. ಜುಲೈ 3 ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಲಾಗುತ್ತದೆ ಎಂದು ತಿಳಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಜೈಲು ಶಿಕ್ಷೆಯನ್ನು ರೂ.25 ಸಾವಿರ ದಂಡದ ಸಹಿದ 3ರಿಂದ 5 ವರ್ಷಕ್ಕೆ ಶಿಕ್ಷೆಯನ್ನು ಏರಿಕೆ ಮಾಡಿತ್ತು. ಒಂದು ವೇಳೆ ಅಪ್ರಾಪ್ತ ವಯಸ್ಕರು, ಮಹಿಳೆಯರು, ಎಸ್‌ಸಿ/ಎಸ್‌ಟಿಯನ್ನು ಗುರಿಯಾಗಿಸಿಕೊಂಡು ನಿಯಮ ಉಲ್ಲಂಘನೆ ಮಾಡಿದರೆ, ಜೈಲು ಶಿಕ್ಷೆಯನ್ನು ಮೂರರಿಂದ 10 ವರ್ಷಗಳಿಗೆ 50,000 ರೂ ದಂಡದೊಂದಿಗೆ ಹೆಚ್ಚಿಸಲಾಗಿತ್ತು.ಸಾಮೂಹಿಕ ಮತಾಂತರಕ್ಕೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡವನ್ನೂ ವಿಧಿಸಲಾಗಿತ್ತು.

ಮತಾಂತರ ಆಗಲು ಇಚ್ಛೆ ಇದ್ದವರು, ಸಂಬಂಧ ಪಟ್ಟ ಪ್ರಾಧಿಕಾರದ ಎದುರು ಅರ್ಜಿ ಸಲ್ಲಿಸಬೇಕಿತ್ತು. ಮತಾಂತರ ಕುರಿತ ಅರ್ಜಿಯನ್ನು ಸದರಿ ಕಚೇರಿಯಲ್ಲಿ ಪ್ರಕಟಿಸಿ, ಆಕ್ಷೇಪ ಸಲ್ಲಿಸಲು ಅವಕಾಶ ಇತ್ತು. ಸಂಬಂಧಿ ಮಾತ್ರವಲ್ಲದೇ, ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಲೂ ಅವಕಾಶ ನೀಡಲಾಗಿತ್ತು.

ಈ ಕಾಯ್ದೆಯು ತಮಗೆ ಬೇಕಾದ ಮತವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ ಎಂದು ಅನೇಕರು ಆರೋಪಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮತಾಂತರ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಿನಲ್ಲೇ ಈ ಕಾಯ್ದೆಯನ್ನು ವಾಪಸ್ ಪಡೆಯುವ ನಿರ್ಣಯ ಕೈಗೊಳ್ಳಲಾಗಿದೆ.

ಎಪಿಎಂಸಿ ಕಾಯ್ದೆ ರದ್ದಿಗೆ ನಿರ್ಧಾರ...
ಈ ನಡುವೆ ಕರ್ನಾಟಕ ಕೃಷಿ ಉತ್ಪನ್ನಗಳ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ಕಾಯ್ದೆಯನ್ನೂ ಹಿಂದಕ್ಕೆ ಪಡೆಯಲು ಸರ್ಕಾರ ನಿರ್ಧರಿಸಿದೆ.

ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಹೇಳಿದ್ದಾರೆ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ಮೇಲೆ  ಸರ್ಕಾರದ ಉದ್ದೇಶ ಈಡೇರಲಿಲ್ಲ. ರೈತರಿಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಕಹಿ ಅನುಭವ ಆಗಿದೆ. ಸಾಕಷ್ಟು ಜನರು ಹಾನಿ ಅನುಭವಿಸಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರವೂ ಕುಸಿತವಾಗಿತ್ತು ಎಂದು ತಿಳಿಸಿದರು.

ಇನ್ನು ಮುಂದೆ ವ್ಯಾಪಾರಕ್ಕೆ ಪರವಾನಗಿ ಪಡೆಯಬೇಕು, ಮಾರುಕಟ್ಟೆ ಒಳಗೆ ಇರುವ ಕಾನೂನು ಹೊರಗೂ ಅನ್ವಯವಾಗುತ್ತದೆ. ಮಾರುಕಟ್ಟೆ ಒಳಗೆ ಎಷ್ಟು ಶುಲ್ಕ ಕಟ್ಟುತ್ತಾರೋ ಹೊರಗೆ ವ್ಯಾಪಾರ ಮಾಡುವವರೂ ಅಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ: ಕಿರುಪುಸ್ತಕ ತರುತ್ತೇವೆಂದ ಸಚಿವ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ‘ನಮ್ಮ ಸರ್ಕಾರ ರಚನೆಯಾಗುವ ವೇಳೆಗೆ ಪಠ್ಯಪುಸ್ತಕಗಳು ಮುದ್ರಣಗೊಂಡು ಮಕ್ಕಳಿಗೆ ತಲುಪಿದ್ದವು. ಈ ಸಮಯದಲ್ಲಿ ನಾವು ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಭಾರಿ ವೆಚ್ಚವನ್ನು ಒಳಗೊಂಡಿರುತ್ತದೆ. ಆದ್ದರಿಂದ ನಾವು ಸಣ್ಣ ಪೂರಕ ಕಿರುಪುಸ್ತಕಗಳಲ್ಲಿ ಬದಲಾವಣೆಗಳನ್ನು ತರುತ್ತಿದ್ದೇವೆ, ಅದನ್ನು ಶಾಲೆಗಳಿಗೆ ನೀಡಲಾಗುವುದು ಮತ್ತು ಶಿಕ್ಷಕರು ಅದಕ್ಕೆ ಅನುಗುಣವಾಗಿ ಮಕ್ಕಳಿಗೆ ಪಾಠ ಮಾಡಲಿದ್ದಾರೆಂದು ಹೇಳಿದರು.

ಸಮಾಜಶಾಸ್ತ್ರ ಮತ್ತು ಕನ್ನಡ ಪಠ್ಯಪುಸ್ತಕಗಳಲ್ಲಿ ಮಾತ್ರ ಬದಲಾವಣೆಗಳನ್ನು ತರಲಾಗುತ್ತಿದೆ. ಹೆಡಗೇವಾರ್ ಮತ್ತು ಸಾವರ್ಕರ್ ಅವರ ಕುರಿತ ಪಾಠಗಳನ್ನು ತೆಗೆಯಲಾಗುತ್ತಿದೆ. ಹಿಂದಿನ (ಬಿಜೆಪಿ ಸರ್ಕಾರದ ಹಿಂದಿನ) ಪಠ್ಯಪುಸ್ತಕಗಳಲ್ಲಿದ್ದ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಪುತ್ರಿಗೆ ಬರೆದ ಪತ್ರದ ಪಾಠಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಇದಲ್ಲದೆ, ಅಂಬೇಡ್ಕರ್ ಅವರ ನೀ ಹೋದ ಮರುದಿನ’ ಕವನವನ್ನೂ ಸೇರಿಸಲಾಗುತ್ತಿದೆ. ಪಠ್ಯಪುಸ್ತಕಗಳ ಪರಿಷ್ಕರಣೆಗೆ ಶೀಘ್ರವೇ ಸಮಿತಿ ರಚಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದರು.

ಪ್ರಸ್ತುತ ರಾಜ್ಯ ಸರ್ಕಾರವು 10 ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಮಾತ್ರ ತಿದ್ದುಪಡಿಗಳನ್ನು ಮಾಡಲು ಮುಂದಾಗಿದ್ದು, ಮುಂದಿನ ವರ್ಷ 6-9ನೇ ತರಗತಿ ಪಠ್ಯಪುಸ್ತಕಗಳಲ್ಲಿ ಹಂತಹಂತವಾಗಿ ಬದಲಾವಣೆಗಳನ್ನು ತರಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com