ಅಯೋಧ್ಯೆ ರಾಮಮಂದಿರದಲ್ಲಿ ದುಬಾರಿ ಸೇವೆಗಳಿರುವುದಿಲ್ಲ: ಪೇಜಾವರ ಶ್ರೀಗಳು
ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಸಾವಿರ, ಲಕ್ಷ ರೂ. ಪಾವತಿಸುವ ಸೇವೆಗಳಿರುವುದಿಲ್ಲ, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಬಡವರ ಸೇವೆ ಮಾಡಿದರೆ ಅದೇ ಶ್ರೀರಾಮನಿಗರ್ಪಿಸುವ ಶ್ರೇಷ್ಠ ಕಾಣಿಕೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ...
Published: 27th June 2023 10:10 AM | Last Updated: 27th June 2023 01:22 PM | A+A A-

ಪೇಜಾವರ ಶ್ರೀಗಳು
ಮಂಗಳೂರು: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಸಾವಿರ, ಲಕ್ಷ ರೂ. ಪಾವತಿಸುವ ಸೇವೆಗಳಿರುವುದಿಲ್ಲ, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಬಡವರ ಸೇವೆ ಮಾಡಿದರೆ ಅದೇ ಶ್ರೀರಾಮನಿಗರ್ಪಿಸುವ ಶ್ರೇಷ್ಠ ಕಾಣಿಕೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ರಾಮ ಮಂದಿರದಲ್ಲಿ 10 ಸಾವಿರ ರೂಪಾಯಿಗಳ ಸೇವೆ, 1 ಲಕ್ಷ ರೂಪಾಯಿಗಳ ಮೊದಲಾದ ಯಾವ ಸೇವೆಯೂ ಇರುವುದಿಲ್ಲ. ಆದರೆ, ದೇವರ ದರ್ಶನಕ್ಕೆ ಬರಿಗೈಲಿ ಹೋಗಬಾರದು. ನಮಗೆ ದಾನ ಮಾಡುವ ಸಾಮರ್ಥ್ಯ ಇದ್ದರೆ, ನಮ್ಮೂರಿನ ಬಡವರಿಗೆ ಮನೆ ನಿರ್ಮಾಣ ಮಾಡಿ ಕೊಡೋಣ. ಅದನ್ನು ಶ್ರೀರಾಮ ದೇವರಿಗೆ ಸಮರ್ಪಿಸೋಣ ಎಂದು ಹೇಳಿದರು.
ಸಂಪ್ರದಾಯದ ಸಂಕೇತವಾಗಿ ಭಕ್ತರು ದೇವಾಲಯಗಳಲ್ಲಿ ‘ಕಣಿಕೆ’ ಅರ್ಪಿಸುತ್ತಾರೆ. ಪ್ರತಿ ದೇವಾಲಯವು ಭಕ್ತರು ದೇವರಿಗೆ ಅರ್ಪಿಸಬಹುದಾದ ಸೇವೆಗಳ ವಿವರಗಳನ್ನು ನೀಡುತ್ತದೆ, ಆದರೆ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಅಂತಹ ದುಬಾರಿ ಸೇವೆಗಳಿರುವುದಿಲ್ಲ. ನಮ್ಮ ಕನಸು ಕೇವಲ ರಾಮ ಮಂದಿರ ನಿರ್ಮಾಣಕ್ಕಷ್ಟೇ ಸೀಮಿತವಾಗದೆ ರಾಮರಾಜ್ಯದ ಸಾಕ್ಷಾತ್ಕಾರವಾಗಬೇಕು, ದಾನ ಧರ್ಮದಿಂದ ಮಾತ್ರ ಅದು ಸಾಧ್ಯ ಎಂದು ತಿಳಿಸಿದರು.
ನೀವು ಉತ್ತಮ ಸ್ಥಿತಿಯಲ್ಲಿದ್ದರೆ, ನಿಮ್ಮ ಗ್ರಾಮದಲ್ಲಿ ಬಡ ನಿರಾಶ್ರಿತ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಿ, ನೀವು ವೈದ್ಯರಾಗಿದ್ದರೆ ಅಥವಾ ಸ್ವಂತ ಆಸ್ಪತ್ರೆಯನ್ನು ಹೊಂದಿದ್ದರೆ, ಬಡವರಿಗೆ ಉಚಿತ ಚಿಕಿತ್ಸೆ ನೀಡಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ಉಚಿತ ಶಿಕ್ಷಣವನ್ನು ನೀಡಿ. ರಾಮನ ಹೆಸರಿನಲ್ಲಿ ಹಸುವನ್ನು ಕೂಡ ಸೇವೆಯಾಗಿ ದತ್ತು ಪಡೆಯಬಹುದು. ನೀವು ಅಯೋಧ್ಯೆಯಲ್ಲಿ ಪ್ರಾರ್ಥಿಸುವಾಗ ನಿಮ್ಮ ಗ್ರಾಮದಲ್ಲಿ ಮಾಡಿದ ಆ ದಾನ ಕಾರ್ಯಗಳನ್ನು ರಾಮನಿಗೆ ಅರ್ಪಿಸಿ. ಇದು ಅಯೋಧ್ಯೆಯಲ್ಲಿ ಭಕ್ತರು ಸಲ್ಲಿಸಬಹುದಾದ ಪರಿಪೂರ್ಣ ಸೇವೆಯಾಗಿದೆ ಎಂದರು.
ಇದನ್ನೂ ಓದಿ: ದೇವಸ್ಥಾನಗಳಿಗೆ ದೇಣಿಗೆ ನೀಡುವುದು ಬೇಡ, ಅಗತ್ಯವಿರುವವರಿಗೆ ಸಹಾಯ ಮಾಡಿ: ಪೇಜಾವರ ಶ್ರೀಗಳು
ಇದೇ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪರಿಸರ ಜಾಗೃತಿಯ ಅಂಗವಾಗಿ ಪೇಜಾವರ ಶ್ರೀಗಳಿಗೆ ಬೀಜ ಮತ್ತು ಸಸಿಗಳನ್ನು ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀಗಳು ಮರಗಳು ನಮಗೆ ಹಣ್ಣು ಮತ್ತು ಹೂವುಗಳನ್ನು ನೀಡುವುದಷ್ಟೇ ಅಲ್ಲ, ಅವು ಮಾನವರಿಗೆ ಅತ್ಯಂತ ಅಗತ್ಯವಿರುವ ಆಮ್ಲಜನಕವನ್ನೂ ಕೂಡ ನೀಡುತ್ತವೆ. "ಕೋವಿಡ್ -19 ಸಾಂಕ್ರಾಮಿಕ ರೋಗ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಜನರು ಹೇಗೆ ಸತ್ತರು ಎಂಬುದನ್ನು ನಾವು ನೋಡಿದ್ದೇವೆ. ಆದಾಗ್ಯೂ, ಜನರು ಇನ್ನೂ ಪ್ರಕೃತಿಯನ್ನು ನಾಶಮಾಡುವುದನ್ನು ಮುಂದುವರೆಸಿದ್ದಾರೆ. ಹಲವು ಸಮಸ್ಯೆಗಳಿಗೆ ಸಸಿಗಳನ್ನು ನೆಡುವುದು ಮತ್ತು ಮರಗಳನ್ನು ಬೆಳೆಸುವುದು ಒಂದೇ ಪರಿಹಾರವಾಗಿದೆ. ನೀವು ದ್ವಿಚಕ್ರ ವಾಹನವನ್ನು ಬಳಸುತ್ತಿದ್ದರೆ ಎರಡು ಸಸಿಗಳನ್ನು ನೆಡಿರಿ. ನಾಲ್ಕು ಚಕ್ರದ ವಾಹನ ಹೊಂದಿರುವವರು ನಾಲ್ಕು ಮರಗಳನ್ನು ಬೆಳೆಸಿ. ಮರಗಳನ್ನು ರಕ್ಷಿಸದವರಿಗೆ ಬದುಕುವ ಹಕ್ಕಿಲ್ಲ ಎಂದರು.
ಬಳಿಕ ಗೋಹತ್ಯೆ ಕುರಿತು ಮಾತನಾಡಿ, ಸಮಾಜದಲ್ಲಿ ಗೋಹತ್ಯೆ ಎಂದೂ ಆಗಬಾರದು. ಅದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಸರ್ಕಾರ ಯಾವುದೇ ಕಾರಣಕ್ಕೂ ಗೋಹತ್ಯಾ ನಿಷೇಧ ಕಾನೂನು ಹಿಂಪಡೆವ ದುಸ್ಸಾಹಸಕ್ಕೆ ಕೈಹಾಕಬಾರದು. ಹಿಂದೂ ಸಂಘಟನೆಯವರು ಕೂಡ ಇಂತಹ ಕೃತ್ಯಗಳನ್ನು ಪೊಲೀಸ್ ಇಲಾಖೆ ಮೂಲಕವೇ ತಡೆಯಬೇಕು. ಅದರಿಂದ ಸಂಘರ್ಷ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.