ದೇವಸ್ಥಾನಗಳಿಗೆ ದೇಣಿಗೆ ನೀಡುವುದು ಬೇಡ, ಅಗತ್ಯವಿರುವವರಿಗೆ ಸಹಾಯ ಮಾಡಿ: ಪೇಜಾವರ ಶ್ರೀಗಳು
ದೇಗುಲಗಳಿಗೆ ದೇಣಿಗೆ ನೀಡದೆ ಸಂಕಷ್ಟದಲ್ಲಿರುವವರ ನೆರವಿಗೆ ಉಪಯೋಗಿಸಿ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು ಮಂಗಳವಾರ ಹೇಳಿದ್ದಾರೆ.
Published: 18th January 2023 09:22 AM | Last Updated: 18th January 2023 06:34 PM | A+A A-

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು
ವಿಜಯಪುರ: ದೇಗುಲಗಳಿಗೆ ದೇಣಿಗೆ ನೀಡದೆ ಸಂಕಷ್ಟದಲ್ಲಿರುವವರ ನೆರವಿಗೆ ಉಪಯೋಗಿಸಿ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಿಗೆ ನೀಡಲಾಗುತ್ತಿರುವ ದೇಣಿಗೆ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಅಥವಾ ತಪ್ಪು ಜನರ ಕೈ ಸೇರುತ್ತಿರುವ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಹೀಗಾಗಿ ಇದನ್ನು ತಡೆಯಲು ದೇವಾಲಾಯಗಳಿಗೆ ನೀಡಲಾಗುತ್ತಿರುವ ದೇಣಿಗೆ ಹಣವನ್ನು ನಿಲ್ಲಿಸುವುದು ಮತ್ತು ಆ ಹಣವನ್ನು ಅಗತ್ಯವಿರುವ ಜನರ ಕಲ್ಯಾಣಕ್ಕಾಗಿ ಬಳಕೆ ಮಾಡುವುದು ಉತ್ತಮ ಮಾರ್ಗವಾಗಿದೆ. ಬಡವರಿಗಾಗಿ ಒಂದು ಸಣ್ಣ ಮನೆಯಾದರೂ ನಿರ್ಮಿಸುವ ಸಾಮರ್ಥ್ಯ ಜನರಲ್ಲಿದ್ದರೆ ಅದನ್ನು ಅವರು ಮಾಡಬೇಕು' ಎಂದು ಹೇಳಿದರು.
ಇದೇ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ದೇಶ ಏನನ್ನು ಸಾಧಿಸುತ್ತದೆ ಎಂಬ ಟೀಕಾಕಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ರಾಮನವಮಿಗೂ ಮುನ್ನ ಅಗತ್ಯವಿರುವವರಿಗೆ ಏನಾದರೂ ಮಾಡಲು ಅಭಿಯಾನವನ್ನು ಆರಂಭಿಸುವಂತೆ ನಾನು ಜನರಿಗೆ ಸಲಹೆ ನೀಡುತ್ತೇನೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಮುನ್ನ 'ರಥ ಯಾತ್ರೆ' ಕೈಗೊಳ್ಳಬೇಕು: ಉಡುಪಿ ಪೇಜಾವರ ಮಠಾಧೀಶ ಒತ್ತಾಯ
ಕಾಲಕಾಲಕ್ಕೆ ಸಮಾಜವನ್ನು ಸ್ವಚ್ಛಗೊಳಿಸಬೇಕು. ಮಠ, ರಾಜಕೀಯ ಪಕ್ಷಗಳು ಬೇಧ – ಭಾವ ಮಾಡಬಾರದು. ಸಂಬಂಧಗಳಲ್ಲಿ ದ್ರೋಹ ಬಗೆಯುವ ಕೆಲಸ ಆಗಬಾರದು. ನಾವು ಸರಿಯಾಗಿ ಇದ್ರೇ ಎಲ್ಲವೂ ಸರಿಯಾಗಿ ಇರುತ್ತೆ. ದೈವ ಭಕ್ತಿ, ದೇಶ ಭಕ್ತಿ ಒಂದೇ. ಶ್ರೀರಾಮನ ಹೆಸರಿನಲ್ಲಿ ಸೇವೆ ಮಾಡೋಣ, ಅದಕ್ಕಾಗಿ `ರಾಮನ ಸೇವೆಯೇ ದೇಶಸೇವೆ ಅನ್ನೋ ಅಭಿಯಾನ ಹಮ್ಮಿಕೊಳ್ಳೋಣ. ಮುಂದಿನ ರಾಮನವಮಿ ಒಳಗಾಗಿ ಈ ಅಭಿಯಾನ ಹಮ್ಮಿಕೊಳ್ಳಲು ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆಂದು ಹೇಳಿದ್ದಾರೆ.
ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಒಂದು ಕನಸು ಆಗಿತ್ತು. ಆದರೀಗ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಆಗಬಾರದು. ಬದಲಿಗೆ ರಾಮರಾಜ್ಯ ಕನಸು ನನಸು ಆಗಬೇಕು. ರಾಮಾಯಣ ಕುರಿತು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದೂ ದೇವಾಲಯಗಳು ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು, ಧ್ವನಿ ವರ್ಧಕ ಬಳಕೆ ಬೇಡ: ಪೇಜಾವರ ಶ್ರೀ
ಯಾವುದೇ ರೀತಿಯಲ್ಲಿ ಹಿಂದುಳಿದವರಿಗೆ ಸಹಾಯ ಮಾಡಬೇಕು. ವರ್ಷದ ಕೊನೆಯಲ್ಲಿ, ಪ್ರತಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯದ ಎಲ್ಲಾ ಕಲ್ಯಾಣ ಯೋಜನೆಗಳ ವಿವರಗಳನ್ನು ಅಪ್‌ಲೋಡ್ ಮಾಡುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಬೇಕು. ಈ ಬೃಹತ್ ಅಭಿಯಾನವು ರಾಮ ಮಂದಿರದ ಟೀಕಾಕಾರರನ್ನು ಮೌನಗೊಳಿಸುತ್ತದೆ ಎಂಬ ಭರವಸೆ ನನಗಿದೆ ಎಂದರು.
ಜನರು ಶ್ರೀರಾಮನ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು. ಶ್ರೀರಾಮನ ಸೇವೆಯು ದೇಶ ಸೇವೆಗೆ ಸಮಾನವಾಗಿದೆ. ಸಾಮಾನ್ಯ ಜನರು ಸಮಾಜಕ್ಕಾಗಿ ಕೆಲಸ ಮಾಡಬಹುದಾದರೆ, ಶ್ರೀಮಂತರಾಗಿರುವ, ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ರಾಜಕಾರಣಿಗಳು ಏಕೆ ಹಾಗೆ ಮಾಡಬಾರದು ಎಂದು ಪ್ರಶ್ನಿಸಿದರು.