ಅಪಘಾತಗಳ ಹೆಚ್ಚಳ: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಅಧ್ಯಯನಕ್ಕೆ ಸಮಿತಿ ರಚನೆ

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ವೇಳೆ ಆಗಿರುವ ಲೋಪದೋಷಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸರಿಪಡಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಭರವಸೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ವೇಳೆ ಆಗಿರುವ ಲೋಪದೋಷಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸರಿಪಡಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಭರವಸೆ ನೀಡಿದ್ದಾರೆ.

ಎನ್‌ಎಚ್‌ಎಐ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎಕ್ಸ್‌ಪ್ರೆಸ್‌ವೇಯಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿರುವುದು ವರದಿಯಾಗುತ್ತಿದ್ದು, ಇದು ಬೇಸರವನ್ನುಂಟು ಮಾಡಿದೆ. ಅವೈಜ್ಞಾನಿಕವಾಗಿ ನಿರ್ಮಾಣವೇ ಇದಕ್ಕೆ ಕಾರಣವಾಗಿದೆ. ಬೈಪಾಸ್‌ಗಳ ಅವೈಜ್ಞಾನಿಕ ನಿರ್ಮಾಣ, ಎಕ್ಸ್‌ಪ್ರೆಸ್‌ವೇ ಮತ್ತು ಗ್ರಾಮ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಕೊರತೆ, ಸಂಪರ್ಕ ರಸ್ತೆಗಳ ಅವೈಜ್ಞಾನಿಕ ನಿರ್ಮಾಣ ಸಮಸ್ಯೆಗೆ ಕಾರಣವಾಗಿದೆ. ಬೀದಿದೀಪಗಳ ಕೊರತೆಯಿಂದಾಗಿ ಪ್ರಯಾಣಿಕರನ್ನು ದುಷ್ಕರ್ಮಿಗಳು ಲೂಟಿ ಮಾಡಿದ ಘಟನೆಗಳೂ ವರದಿಯಾಗಿವೆ. ಹೀಗಾಗಿ ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸಲು ಜನರು ಭಯಪಡುತ್ತಿದ್ದಾರೆ. 25 ಸೆಂ.ಮೀ ರಸ್ತೆ ವಿಭಜಕದ ಬದಲು ಕನಿಷ್ಠ 4 ಅಡಿ ವಿಭಜಕಗಳಿದ್ದರೆ ಅಪಘಾತಗಳನ್ನು ತಡೆಯಬಹುದಿತ್ತು. ಮಳೆಗಾಲದಲ್ಲಿ ನೀರು ನಿಲ್ಲದಂತೆ ತಡೆಯಲು ಎನ್‌ಎಚ್‌ಎಐ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಎಂದು ಹೇಳಿದರು.

ಇದೇ ವೇಳೆ ತುರ್ತು ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ವಿಐಪಿ ವಾಹನಗಳಿಗೆ ಟೋಲ್‌ಗೇಟ್‌ನಲ್ಲಿ ಪ್ರತ್ಯೇಕ ಪಥದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಜ್ಞರ ಸಮಿತಿಯು ವರದಿ ಸಲ್ಲಿಸಿದ ಬಳಿಕ, ಸಮಸ್ಯೆಗಳನ್ನು ಸರಿಪಡಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಏತನ್ಮಧ್ಯೆ, ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸುಮಾರು ನೂರಾರು ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ, ಅಪಘಾತ ಸಂದರ್ಭದಲ್ಲಿ ಜೀವ ಉಳಿಸಲು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಮಾ ಕೇರ್ ಸೆಂಟರ್ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುವಂತೆ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಟ್ಟು 118 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ರಾಮನಗರ 55 ಕಿಮೀ, ಮಂಡ್ಯ 58 ಕಿಮೀ ಮತ್ತು ಮೈಸೂರು 5 ಕಿಮೀ ವಿಸ್ತಾರದೊಂದಿಗೆ ಹಾದು ಹೋಗುತ್ತದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ (ಸೆಪ್ಟೆಂಬರ್ 2022 ರಿಂದ ಜೂನ್ 2023), ಸುಮಾರು 595 ಅಪಘಾತಗಳು ವರದಿಯಾಗಿದ್ದು, 158 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಜನವರಿಯಿಂದ ಇಲ್ಲಿಯವರೆಗಿನ ಸಂಭವಿಸಿದ ಅಪಘಾತಗಳಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ 55 ಮಂದಿ ಸಾವನ್ನಪ್ಪಿದ್ದು, 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ರೀತಿ, ಹೊಸ ಬೈಪಾಸ್‌ನಲ್ಲಿ 269 ಅಪಘಾತಗಳು ವರದಿಯಾಗಿವೆ, ಇದರಲ್ಲಿ 92 ಜನರು ಸಾವನ್ನಪ್ಪಿದ್ದಾರೆ, ಈ ವರದಿ ಆಘಾತಕಾರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎಕ್ಸ್‌ಪ್ರೆಸ್‌ವೇಯಲ್ಲಿ ವೇಗದ ಮಿತಿ ಇಲ್ಲದ ಕಾರಣ ವಾಹನಗಳು 120 ರಿಂದ 140 ಕಿ.ಮೀ ವೇಗದಲ್ಲಿ ಸಂಚರಿಸುತ್ತವೆ. ಮಾರ್ಗಸೂಚಿ ಫಲಕಗಳ ಕೊರತೆ ಹಾಗೂ ಕಡಿದಾದ ರಸ್ತೆಯಿಂದಾಗಿ ಹಲವು ಕಡೆ ಅಪಘಾತಗಳು ಸಂಭವಿಸುತ್ತಿವೆ. ಅಪಘಾತಕ್ಕೀಡಾದವರನ್ನು ಬೆಂಗಳೂರು ಅಥವಾ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಬೇಕಾಗಿರುವುದರಿಂದ, ಸಾಕಷ್ಟು ಮಂದಿ 'ಗೋಲ್ಡನ್ ಅವರ್' ಸಮಯದಲ್ಲಿ ಚಿಕಿತ್ಸೆ ಸಿಗದೆ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಹೀಗಾಗಿ  ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಮಾ ಕೇರ್ ಸೆಂಟರ್ ಮತ್ತು ಹೈಟೆಕ್ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿ 30 ಕಿ.ಮೀ ದೂರದಲ್ಲಿ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ, ಇದರಿಂದಾಗಿ ಅಪಘಾತಕ್ಕೊಳಗಾದವರನ್ನು ಕೂಡಲೇ ಆಸ್ಪತ್ರೆಗಳಿಗೆ ಸ್ಥಳಾಂತರಿಸಬಹುದು ಎಂದು ದಿನೇಶ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com