ಬೆಂಗಳೂರು: ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಕರ್ನಾಟಕ ಲೋಕಾಯುಕ್ತ ಉಪ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಿದೆ. ನಾಲ್ಕೈದು ದಿನಗಳು ಕಳೆದರೂ ಬಂಧನ ಸಾಧ್ಯವಾಗದಿದ್ದದ್ದಕ್ಕೆ ಕರ್ನಾಟಕ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಒಬ್ಬ ಶಾಸಕರನ್ನು ಬಂಧಿಸಲು ಮೂರ್ನಾಲ್ಕು ದಿನದಿಂದ ಶೋಧ ನಡೆಸಬೇಕೆ? ಇದನ್ನು ಜನ ನಂಬಬೇಕೆ? ಹಂಪಿಯಲ್ಲಿ ರೀಲ್ಸ್ ಮಾಡಿದವರನ್ನೆಲ್ಲ ಹುಡುಕಿ ಬಂಧಿಸುವ ಪೊಲೀಸರಿಗೆ ಜನಪ್ರತಿನಿಧಿಯೊಬ್ಬರು ಕೈಗೆ ಸಿಗುವುದಿಲ್ಲವೇ? ಬಸವರಾಜ ಬೊಮ್ಮಾಯಿ ಅವರೇ, ನೀವು ಮತ್ತು ನಿಮ್ಮ 40% ಪಟಾಲಂ ಯಾರ ಕಿವಿ ಮೇಲೆ ಹೂವ ಇಡಲು ಹೊರಟಿದ್ದೀರಿ? ಎಂದು ಕಿಚಾಯಿಸಿದೆ.
ಭ್ರಷ್ಟಾಚಾರದ ಆರೋಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಇನ್ನೂ ಬಂಧಿಸಲಾಗಿಲ್ಲ ಎಂದರೆ ಏನರ್ಥ ಬಸವರಾಜ ಬೊಮ್ಮಾಯಿ ಅವರೇ? ಪೊಲೀಸರು ಅಸಮರ್ಥರೇ? ಸರ್ಕಾರದ ಅಸಮರ್ಥ್ಯವೇ? ಅಥವಾ ಭ್ರಷ್ಟರ ರಕ್ಷಣೆಯೇ? ಶಾಸಕರಾದವರು ಪೊಲೀಸರ ಕೈಗೆ ಸಿಗದಿರಲು ಸಾಧ್ಯವೇ? ಇಂಟಲಿಜೆನ್ಸ್ ನಿದ್ದೆ ಮಾಡುತ್ತಿದೆಯೇ? ಎಂದು ಪ್ರಶ್ನಿಸಿದೆ.
'ಜನರ ಬೆವರಿನ ದುಡ್ಡು, ಬಿಜೆಪಿಯ ಜಾತ್ರೆ'. ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಬಿಜೆಪಿ ಪಕ್ಷದ ಪ್ರಚಾರಕ್ಕೆ ಸರ್ಕಾರದ ಹಣ ಬಳಸುತ್ತಿರುವುದೇಕೆ?. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಹಣವಿಲ್ಲ. ಆದರೆ, ವ್ಯರ್ಥ ಸಮಾವೇಶಕ್ಕೆ ಹಣವಿದೆ! ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಲು ಹಕ್ಕು ಬಿಜೆಪಿಗಿಲ್ಲ ಎಂದು ಕಟುವಾಗಿ ಟೀಕಿಸಿದೆ.
ಎಲ್ಲೆಡೆಯಿಂದಲೂ ಭ್ರಷ್ಟಾಚಾರದ್ದೇ ಆರೋಪ, ಎಲ್ಲಾ ಕಡೆಯಿಂದಲೂ ದೂರಿನ ಪತ್ರಗಳು. ಸರ್ಕಾರದ ಪ್ರತಿಕ್ರಿಯೆ ಮಾತ್ರ ಮೌನ!. ಬಿಎಂಆರ್‌ಸಿಎಲ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನಿವೃತ್ತ ಅಧಿಕಾರಿಯ ಪತ್ರವನ್ನು ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವರೇ ಅಥವಾ ಸಮರ್ಥನೆಗೆ ಇಳಿಯುವರೇ? ಎಂದಿದೆ.
ಕೆಎಸ್‌ಡಿಎಲ್ ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದ ಸುಳಿವು ಸರ್ಕಾರಕ್ಕಿದ್ದರೂ ಸುಮ್ಮನೆ ಕುಳಿತಿದ್ದೇಕೆ. ಸ್ವತಂತ್ರ ಸಂಸ್ಥೆ ಲೋಕಾಯುಕ್ತದ ದಾಳಿಯನ್ನು 'ಕ್ರೆಡಿಟ್' ಆಗಿ ಪರಿವರ್ತಿಸಲು ಹವಣಿಸುವ ಮೊದಲು ಭ್ರಷ್ಟಾಚಾರದ ನಿಗ್ರಹಕ್ಕೆ ಸರ್ಕಾರದ ಕ್ರಮ ಏನಿದೆ ಹೇಳಿ? ಇನ್ನೂ ಶಾಸಕರ ಬಂಧನವೇಕಿಲ್ಲ? ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
Advertisement