ಬೆಂಗಳೂರು: ಮನೆಗೆ ನುಗ್ಗಿದ ಖದೀಮರು, ವಿದ್ಯಾರ್ಥಿನಿಗೆ ಚಾಕು ತೋರಿಸಿ ದರೋಡೆ
ಬೆಂಗಳೂರು-ಆನೇಕಲ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿರುವ ಖದೀಮರು ಒಬ್ಬಂಟಿಯಾಗಿದ್ದ ವಿದ್ಯಾರ್ಥಿನಿಗೆ ಚಾಕು ತೋರಿಸಿ, ಬೆದರಿಸಿ ದರೋಡೆ ಮಾಡಿರುವ ಘಟನೆ ನಡೆದಿದೆ.
Published: 08th March 2023 11:46 AM | Last Updated: 08th March 2023 01:20 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು-ಆನೇಕಲ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿರುವ ಖದೀಮರು ಒಬ್ಬಂಟಿಯಾಗಿದ್ದ ವಿದ್ಯಾರ್ಥಿನಿಗೆ ಚಾಕು ತೋರಿಸಿ, ಬೆದರಿಸಿ ದರೋಡೆ ಮಾಡಿರುವ ಘಟನೆ ನಡೆದಿದೆ.
ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಆರ್.ಕೀರ್ತನಾ ಅವರಿಗೆ ಚಾಕು ತೋರಿಸಿ ಬೆದರಿಸಿರುವ ದರೋಡೆಕೋರರು, ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಲಕ್ಷ್ಮಿನಗರ ಲೇಔಟ್‌ನಲ್ಲಿ ಮನೆಯಲ್ಲಿ ಕೀರ್ತನಾ ಅವರು ಒಬ್ಬಂಟಿಯಾಗಿದ್ದರು. ಈ ವೇಳೆ ಮನೆ ಬಳಿಗೆ ಬಂದ ಕೆಲ ವ್ಯಕ್ತಿಗಳು ಸ್ಥಳೀಯ ವ್ಯಕ್ತಿಯೊಬ್ಬನನ್ನು ಹುಡುಕುತ್ತಿರವುದಾಗಿ ಹೇಳಿದ್ದಾರೆ. ವ್ಯಕ್ತಿಗಳೊಂದಿಗೆ ಮಾತನಾಡಿದ ಕೀರ್ತನಾ ಅವರು ಅನುಮಾನಗೊಂಡು ಬಾಗಿಲು ಹಾಕರು ಮುಂದಾಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಒಳನುಗ್ಗಿರುವ ದುಷ್ಕರ್ನಿಗಳು ಆಕೆಯ ಕೈಕಾಲು ಕಟ್ಟಿ, ಬಾಯಿಯನ್ನು ಮುಚ್ಚಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ. ನಂತರ ಯುವತಿಯನ್ನು ಶೌಚಾಲಯದ ಒಳಗೆ ತಳ್ಳಿ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಉಡುಪಿ: ಸ್ಕೂಟರ್ ನಲ್ಲಿದ್ದವರ ಮೇಲೆ ಹರಿದ ಟ್ಯಾಂಕರ್; ಸ್ಥಳದಲ್ಲೇ ಇಬ್ಬರ ದುರ್ಮರಣ!
ಸ್ವಲ್ಪ ಸಮಯದ ನಂತರ ತನ್ನನ್ನು ಬಿಡಿಸಿಕೊಳ್ಳುವಲ್ಲಿ ವಿದ್ಯಾರ್ಥಿನಿ ಯಶಶ್ವಿಯಾಗಿದ್ದು, ಭಯದಿಂದ ಕೂಗಿದ್ದಾರೆ. ನಂತರ ಸ್ಥಳೀಯರು ರಕ್ಷಣೆಗೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 1ರಿಂದ 1.15ರ ನಡುವೆ ಈ ಘಟನೆ ನಡೆದಿದ್ದು, ಆರೋಪಿಗಳು ಮಾಸ್ಕ್ ಧರಿಸಿದ್ದರು ಎಂದು ಕೀರ್ತನಾ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದುಷ್ಕರ್ಮಿಗಳು ದೋಚಿದ್ದು, ಸಿಮ್ ಕಾರ್ಡ್ ಅನ್ನು ವಿದ್ಯಾರ್ಥಿನಿಯ ಸೆಲ್ ಫೋನ್ ಅನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ.
ದುಷ್ಕರ್ಮಿಗಳು ನನ್ನ ಮಗಳಿಗೆ ಏನೂ ಮಾಡಿಲ್ಲ. ಆದರೆ, ಆಕೆಯನ್ನು ಶೌಚಾಲಯದ ಒಳಗೆ ತಳ್ಳಿದಾಗ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿಗಳು ಉತ್ತರ ಕರ್ನಾಟಕ ಭಾಷೆಯಲ್ಲಿ ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಿದ್ದಾಳೆ. ಮಗಳ ಕಾಲೇಜು ಬ್ಯಾಗ್'ನ್ನೂ ಹೊತ್ತೊಯ್ದಿದ್ದಾರೆಂದು ಕೀರ್ತನಾ ತಂದೆ ರವೀಂದ್ರಗೌಡ ಅವರು ತಿಳಿಸಿದ್ದಾರೆ.
ಘಟನೆ ಸಂಬಂಧ ಆರೋಪಿಗಳ ವಿರುದ್ಧ ದರೋಡೆ, ಸುಲಿಗೆ, ಅತಿಕ್ರಮಣ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳು ದಾಖಲಿಸಲಾಗಿದೆ.