ಹಣ ಬಿಡುಗಡೆಗೆ ಅಧಿಕಾರಿಗಳಿಂದ ಶೇ 10ರಷ್ಟು ಲಂಚಕ್ಕೆ ಬೇಡಿಕೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಆರೋಪ

ಸರ್ಕಾರದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಕಾಮಗಾರಿಗಳ ಬಿಲ್‌ಗಳನ್ನು ತೆರವುಗೊಳಿಸಲು ಉತ್ತರ ಕರ್ನಾಟಕ ಭಾಗದ ಮುಖ್ಯ ಎಂಜಿನಿಯರ್‌ಗಳು ಶೇ 10ರಷ್ಟು ಲಂಚ ಕೇಳುತ್ತಿದ್ದಾರೆ. ಈ ಪರಿಸ್ಥಿತಿ ಹೀಗೆಯೇ ಮುಂದವರೆದಿದ್ದೇ ಆದರೆ...
ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ

ಬೆಂಗಳೂರು: ಸರ್ಕಾರದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಕಾಮಗಾರಿಗಳ ಬಿಲ್‌ಗಳನ್ನು ತೆರವುಗೊಳಿಸಲು ಉತ್ತರ ಕರ್ನಾಟಕ ಭಾಗದ ಮುಖ್ಯ ಎಂಜಿನಿಯರ್‌ಗಳು ಶೇ 10ರಷ್ಟು ಲಂಚ ಕೇಳುತ್ತಿದ್ದಾರೆ. ಈ ಪರಿಸ್ಥಿತಿ ಹೀಗೆಯೇ ಮುಂದವರೆದಿದ್ದೇ ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸವನ್ನು ಮುತ್ತಿಗೆ ಹಾಕಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರವು ಲೆಟರ್ ಆಫ್ ಕ್ರೆಡಿಟ್ (ಎಲ್‌ಒಸಿ) ಮೊತ್ತವನ್ನು ಬಿಡುಗಡೆ ಮಾಡಿದ್ದರೂ, ಇಂಜಿನಿಯರ್‌ಗಳು ಅದನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ಇಂಜಿನಿಯರ್‌ಗಳು ಲಂಚ ಪಡೆಯುವ ಚಿಂತನೆಯದಲ್ಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟಂತಹ ಅಧಿಕಾರಿಗಳು ವಿಚಾರಣೆ ನಡೆಸಬಹುದು. ಸರಕಾರದ ಬಳಿ ಬಾಕಿ ಇರುವ 22,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿದ್ದು, ಸಂಪನ್ಮೂಲಗಳ ಲಭ್ಯತೆಗೆ ಅನುಗುಣವಾಗಿ ಹೊಸ ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕು ಎಂದು ಹೇಳಿದರು.

"ನಿಯಮಗಳ ಪ್ರಕಾರ 80 ರಷ್ಟು ಮೊತ್ತವನ್ನು ಹಿರಿತನದ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಮತ್ತು 20 ರಷ್ಟು ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ, ಆದರೆ ಎಂಜಿನಿಯರ್‌ಗಳು ಬಾಕಿ ಇರುವ ಬಿಲ್‌ಗಳನ್ನು ಬದಿಗಿಟ್ಟು ಎರಡು ತಿಂಗಳ ಹಿಂದಷ್ಟೇ ಕಾಮಗಾರಿ ಪೂರ್ಣಗೊಳಿಸಿದವರಿಗೆ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ.

‘ಲೋಕೋಪಯೋಗಿ ಇಲಾಖೆಯಲ್ಲಿ ರೂ.5 ಸಾವಿರ ಕೋಟಿ, ಬೃಹತ್‌ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ರೂ.8 ಸಾವಿರ ಕೋಟಿ ಮತ್ತು ಬಿಬಿಎಂಪಿಯಲ್ಲಿ ರೂ. 3 ಸಾವಿರ ಕೋಟಿ ಹಣ ಬರಬೇಕಿದೆ. ಅತಿ ಹೆಚ್ಚು ಕಾಮಗಾರಿಗಳು ನಡೆದಿದ್ದು ಕೂಡ ಈ ಮೂರು ಇಲಾಖೆಗಳಲ್ಲಿಯೇ. ಒಟ್ಟು ರೂ.16 ಸಾವಿರ ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ವಿಧಾನಸಭಾ ಚುನಾವಣೆ ಹತ್ತಿರವಿದ್ದು, ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಲಿದೆ. ಹೀಗಾಗಿ ಚುನಾವಣೆಯ ದಿನಾಂಕ ಘೋಷಣೆಯಾಗುವ ಮುನ್ನವೇ ತ್ವರಿತವಾಗಿ ಬಾಕಿ ಮೊತ್ತ ಪಾವತಿಸಬೇಕು. ಒಂದು ವಾರದೊಳಗೆ ಹಣ ಭರವಸೆ ಪತ್ರ (ಎಲ್‌ಒಸಿ) ಬಿಡುಗಡೆಯಾಗಲಿದ್ದು, ಅದರಲ್ಲಿ ಸೇವಾ ಹಿರಿತನವನ್ನು ಪಾಲಿಸಬೇಕು. ಇಲ್ಲದಿದ್ದರೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. ನಂತರ ಮುಖ್ಯಮಂತ್ರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

‘ಕಾಮಗಾರಿಗಳು ಪೂರ್ಣಗೊಂಡ ನಂತರ ಬಿಲ್‌ ಪಾವತಿಗೆ ಹೊಸ ತಂತ್ರಜ್ಞಾನವನ್ನು ರೂಪಿಸಿಕೊಳ್ಳಬೇಕು. ಆಯಾ ಇಲಾಖೆಗಳ ಕಚೇರಿಗಳಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ನಾಮಫಲಕದಲ್ಲಿ ಅಳವಡಿಸಿ ಎಷ್ಟು ಮೊತ್ತ ಬಾಕಿ ಇದೆ, ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಪ್ರಕಟಿಸಬೇಕು. ಎಲ್ಲ ಇಲಾಖೆಗಳ ಪೂರ್ಣಗೊಳಿಸಿದ, ಚಾಲ್ತಿಯಲ್ಲಿರುವ ಮತ್ತು ಮುಂಬರುವ ಕಾಮಗಾರಿಗಳ ಮೊತ್ತದ ಅಂದಾಜು ಪಟ್ಟಿಯನ್ನು ತಯಾರಿಸಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com