ಕರ್ನಾಟಕಕ್ಕೆ ಸೇರಿದ ಗಡಿ ಭಾಗದ 865 ಗ್ರಾಮಗಳಿಗೆ ಮಹಾರಾಷ್ಟ್ರದಿಂದ ಅನುದಾನ ಬಿಡುಗಡೆ: ಕ್ರಮಕ್ಕೆ ರಾಜ್ಯ ಸರ್ಕಾರ ಮುಂದು

ಗಡಿ ವಿವಾದ ಮುಂದಿಟ್ಟುಕೊಂಡು ಪದೇ ಪದೆ ಕರ್ನಾಟಕದ ಜತೆಗೆ ಕ್ಯಾತೆ ತೆಗೆಯುತ್ತಾ ಬಂದಿರುವ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ 865 ಹಳ್ಳಿ, ಪಟ್ಟಣಗಳಲ್ಲಿನ ಜನರಿಗೆ ಆರೋಗ್ಯ ವಿಮೆ ನೀಡಲು ಮುಂದಾಗಿದೆ.
ಸಿಎಂ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ.
ಸಿಎಂ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ.

ಬೆಂಗಳೂರು: ಗಡಿ ವಿವಾದ ಮುಂದಿಟ್ಟುಕೊಂಡು ಪದೇಪದೇ ಕರ್ನಾಟಕದ ಜತೆಗೆ ಕ್ಯಾತೆ ತೆಗೆಯುತ್ತಾ ಬಂದಿರುವ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ 865 ಹಳ್ಳಿ, ಪಟ್ಟಣಗಳಲ್ಲಿನ ಜನರಿಗೆ ಆರೋಗ್ಯ ವಿಮೆ ನೀಡಲು ಮುಂದಾಗಿದೆ. ರಾಜ್ಯ ಗಡಿ ಭಾಗ ನಿಪ್ಪಾಣಿ ಹಾಗೂ ಬೆಳಗಾವಿ ಭಾಗದ ಜನರಿಗೆ ಜ್ಯೋತಿಬಾ ಆರೋಗ್ಯ ವಿಮೆ ಮಾಡುವುದಕ್ಕೆ 54 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಈ ಬೆಳವಣಿಗೆಗೆ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.

ಮಹಾರಾಷ್ಟ್ರದ ಈ ಕ್ರಮಕ್ಕೆ ರಾಜ್ಯ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರ ಸರ್ಕಾರದ ಯೋಜನೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಹಾರಾಷ್ಟ್ರದವರು ರಾಜ್ಯದ ಗಡಿ ಗ್ರಾಮಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಆರೋಗ್ಯ ವಿಮೆ ಯೋಜನೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರದವರು ಏನು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ತಡೆಯುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡುತ್ತಿರುವ ವಿಚಾರವಾಗಿ ತಮ್ಮ ರಾಜೀನಾಮೆಗೆ ಒತ್ತಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಹಾರಾಷ್ಟ್ರದವರು ಅನುದಾನ ಬಿಡುಗಡೆ ಮಾಡಿದರೆ ನಾನೇಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದರು.

‘ನಾವು ಕೂಡ ಕನ್ನಡಿಗರು ಭೇಟಿ ನೀಡುವ ಮಹಾರಾಷ್ಟ್ರದಲ್ಲಿರುವ ಪಂಢರಪುರ, ತುಳಜಾಪುರಕ್ಕೆ ಅನುದಾನ ಬಿಡುಗಡೆ ಮಾಡಿದ್ದೇವೆ. ಗಡಿಗ್ರಾಮಗಳಿಗೆ ಅವರೇನು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ತಡೆಯಲು ಏನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಡಿ.ಕೆ.ಶಿವಕುಮಾರ್‌ ಅವರಿಂದ ನಾನು ಈ ವಿಚಾರದಲ್ಲಿ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದ 865 ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಜ್ಯೋತಿಬಾ ಆರೋಗ್ಯ ವಿಮೆ ಅನುಷ್ಠಾನಕ್ಕೆ 54 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಿತ್ತು.

865 ಹಳ್ಳಿಗಳಲ್ಲಿ ವಾಸಿಸುವ ಮರಾಠಿ ಮಾತನಾಡುವ ಮತ್ತು ಮರಾಠಿ ಮಾತನಾಡದ ಕುಟುಂಬಗಳ ಕಲ್ಯಾಣಕ್ಕಾಗಿ ಹಣವನ್ನು ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿತ್ತು.

ಕನ್ನಡ ಸಂಘಟನೆಗಳ ಖಂಡನೆ
ಕರ್ನಾಟಕದಲ್ಲಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ವಿವಿಧ ಕನ್ನಡ ಸಂಘಟನೆಗಳು ಖಂಡಿಸಿವೆ.

ಎರಡೂ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್‌ ಅಂಗಳದಲ್ಲಿದ್ದು, ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನಿರ್ಧಾರವು ನ್ಯಾಯಾಂಗ ನಿಂದನೆ ಪ್ರಕರಣವಾಗಲಿದೆ ಎಂದು ಹೇಳಿವೆ.

ಕಳೆದ ಡಿಸೆಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ರೂಪಿಸಲಾದ ರಾಜಿ ಸೂತ್ರವನ್ನು ಮಹಾರಾಷ್ಟ್ರ ಸರ್ಕಾರ ಉಲ್ಲಂಘಿಸಿದೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಅವರು ಹೇಳಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರ ಕೂಡ ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಜನರ ಪ್ರಾಬಲ್ಯವಿರುವ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಶಾಲೆಗಳಲ್ಲಿ ಪುಸ್ತಕಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ಕೂಡ ವಿತರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com