ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಈ ನಡುವಲ್ಲೇ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿರುವ ಆಡಳಿತಾರೂಢ ಬಿಜೆಪಿ ಸರ್ಕಾರವು ಹಲವು ಯೋಜನೆಗಳಿಗೆ ಚಾಲನೆಗಳನ್ನು ನೀಡುತ್ತಿದೆ. ಮಲ್ಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ 108 ಅಡಿ ಎತ್ತರದ ಮಾದಪ್ಪನ ಬೃಹತ್ ಪ್ರತಿಮೆ ನಿರ್ಮಾಣಗೊಳ್ಳುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಪ್ರತಿಮೆಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಚುನಾವಣೆ ಹತ್ತಿರದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣಾ ನೀತಿ ಸಂಹಿತೆ ಜಾರಿಯಾಗವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಸರ್ಕಾರವು ಮಲ್ಲೆ ಮಹದೇಶ್ವರ ಸ್ವಾಮಿ ಬೆಟ್ಟದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆಯ ಮಾದರಿಯಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿ ಬೃಹತ್ ಪ್ರಚಾರ ಆರಂಭಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಬೃಹತ್ ಪ್ರತಿಮೆ ಜೊತೆಗೆ ಭಕ್ತರು ನೀಡಿದ ಬೆಳ್ಳಿ ರಥವನ್ನು ಲೋಕಾರ್ಪಣೆ ಮಾಡಲು ಸರ್ಕಾರವು ತರಾತುರಿಯಲ್ಲಿದ್ದು, ಸರ್ಕಾರದ ಈ ನಡೆಗೆ ಹಲವು ಟೀಕೆಗಳು ಕೇಳಿ ಬರುತ್ತಿವೆ.
ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರವು ಒಂದು ಎಕರೆ ಜಾಗದಲ್ಲಿ ಪ್ರತಿಮೆ ಹಾಗೂ ವಸ್ತು ಸಂಗ್ರಹಾಲಯಕ್ಕೆ ರೂ.20 ಕೋಟಿ ವೆಚ್ಚ ಮಾಡಿದೆ.
ವಸ್ತುಸಂಗ್ರಹಾಲಯದ ಕೆಲಸವು ಶೇ.50ಕ್ಕಿಂತಲೂ ಕಡಿಮೆ ಪೂರ್ಣಗೊಂಡಿದ್ದು, ಇನ್ನೂ ರಸ್ತೆ ಕಾಮಗಾರಿ, ಉದ್ಯಾನವನಗಳು, ಕುಡಿಯುವ ನೀರು, ಶೌಚಾಲಯಗಳು ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳ ಕಾರ್ಯಗಳು ಪೂರ್ಣಗೊಂಡಿಲ್ಲ. ಈ ಕಾರ್ಯಗಳು ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಮಾತ್ರ, ಮಾರ್ಚ್ 18 ರಂದು ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಇನ್ನು ಬೆಳ್ಳಿ ರಥದ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಕಾಮಗಾರಿ ಮುಗಿದ ಬಳಿಕವೇ ಉದ್ಘಾಟನೆ ಮಾಡಬೇಕು ಎಂದು ಹಲವು ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಸರ್ಕಾರ ಈ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಹೊಂಗನೂರು ಪ್ರಕಾಶ್ ಅವರು ಟೀಕಿಸಿದ್ದಾರೆ.
Advertisement