108 ಅಡಿ ಎತ್ತರದ ಬೃಹತ್ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಶೀಘ್ರದಲ್ಲೇ ನಿರ್ಧಾರ: ಸಿಎಂ ಬೊಮ್ಮಾಯಿ

ಘಟಪ್ರಭಾ ನದಿ ದಡದಲ್ಲಿ 108 ಅಡಿ ಎತ್ತರದ ಬೃಹತ್ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಮಾಹಿತಿ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ನಡೆದ ಶ್ರೀ ಬಸವೇಶ್ವರರ ನೂತನ ಪ್ರತಿಮೆ ಸ್ಥಾಪನೆಗೆ ಶಾಸಕ ಅಭಯ ಪಾಟೀಲ ಹಾಗೂ ಸಿಎಂ ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿದರು.
ಬೆಳಗಾವಿಯಲ್ಲಿ ಬುಧವಾರ ನಡೆದ ಶ್ರೀ ಬಸವೇಶ್ವರರ ನೂತನ ಪ್ರತಿಮೆ ಸ್ಥಾಪನೆಗೆ ಶಾಸಕ ಅಭಯ ಪಾಟೀಲ ಹಾಗೂ ಸಿಎಂ ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿದರು.

ಬೆಳಗಾವಿ: ಘಟಪ್ರಭಾ ನದಿ ದಡದಲ್ಲಿ 108 ಅಡಿ ಎತ್ತರದ ಬೃಹತ್ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಮಾಹಿತಿ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆ (ಬಿಸಿಸಿ) ಹಾಗೂ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಕಂಚಿನ ನೂತನ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ಘಟಪ್ರಭಾ ದಂಡೆಯಲ್ಲಿ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಸ್ಥಾಪನೆಯಾಗಬೇಕು ಎಂಬುದು ಬೆಳಗಾವಿಯ ಶ್ರೀಗಳ ಆಶಯವಾಗಿದ್ದು, ಈ ಕುರಿತು ಡಾ.ಪ್ರಭಾಕರ ಕೋರೆ ಹಾಗೂ ಇತರ ಮುಖಂಡರಿಂದ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

“ಬಸವಣ್ಣನವರ ಸಂದೇಶಗಳು, ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವೆಲ್ಲವೂ ಸತ್ಯದ ಮೇಲೆ ನಿಂತಿವೆ. ಬಸವಣ್ಣನವರ ವಚನಗಳು ಶುದ್ಧ ಮತ್ತು ಸರಳವಾದ ಕನ್ನಡ ಭಾಷೆಯಲ್ಲಿರುವುದರಿಂದ ಜನರು ಬಸವಣ್ಣನವರ ವಚನಗಳ ಬಗ್ಗೆ ಮಾತನಾಡುತ್ತಿದ್ದಾರೆ. ‘ಅನುಭವ ಮಂಟಪ’ವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದ ವಿಶ್ವದ ಮೊದಲ ವ್ಯಕ್ತಿ ಬಸವಣ್ಣ. ಬೆಳಗಾವಿಯಲ್ಲಿ ಬಸವಣ್ಣನವರ ನೂತನ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಮಾತನಾಡಿ, ‘ಸುಮಾರು 60 ವರ್ಷಗಳ ಹಿಂದೆ ಇಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಲಾಗಿತ್ತು, ವೀರಶೈವ ಲಿಂಗಾಯತ ಮಹಾಸಭಾದೊಂದಿಗೆ ಕೂಲಂಕಷವಾಗಿ ಚರ್ಚಿಸಿ ಕಂಚಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಮುಂಬೈನಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಬೊಮ್ಮಾಯಿ ಅವರು ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಬೇಕು ಮತ್ತು ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮಾದರಿಯಲ್ಲಿ ಬಸವಣ್ಣನವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮಿ, ಮೇಯರ್ ಶೋಭಾ ಸೋಮನಾಚೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ ಬೆನಕೆ, ಜಿಲ್ಲಾಧ್ಯಕ್ಷರಾದ ಚನ್ನರಾಜ ಹಟ್ಟಿಹೊಳಿ, ವೀರಭ ರತ್ನಯ್ಯ ಹಟ್ಟಿಹೊಳಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com