ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ರಾಹುಲ್ ಗಾಂಧಿ ರಾಜ್ಯ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ: ಸಿಎಂ ಬೊಮ್ಮಾಯಿ

ಮಾರ್ಚ್ 20 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ ಭೇಟಿ ನೀಡಿದರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.

ಬೆಳಗಾವಿ: ಮಾರ್ಚ್ 20 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ ಭೇಟಿ ನೀಡಿದರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭೇಟಿಯಿಂದ ಬಿಜೆಪಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಸಂಘಟನೆ ವಿಚಾರದಲ್ಲಿ ನಾವು ಬಲಿಷ್ಠವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ವಿವಿಧ ಮೋರ್ಚಾಗಳ ಸಮಾವೇಶಗಳು, ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶಗಳು ಮತ್ತು ರಥಯಾತ್ರೆಯಂತಹ ಹಲವಾರು ಚಟುವಟಿಕೆಗಳು ನಡೆಯುತ್ತಿವೆ. ಬಿಜೆಪಿಯ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದು, ಪಕ್ಷ ಸಂಘಟನೆಗಾಗಿ ಅವರ ಭೇಟಿ ಮುಂದುವರಿಯಲಿದೆ ಎಂದು ತಿಳಿಸಿದರು.

ವಸತಿ ಸಚಿವ ವಿ ಸೋಮಣ್ಣ ಅವರು ನನಗೆ ಮಾಹಿತಿ ನೀಡಿಯೇ ದೆಹಲಿಗೆ ಭೇಟಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ತೀವ್ರ ಪೈಪೋಟಿ ಏರ್ಪಟ್ಟಿರುವ ಕುರಿತು ಮಾತನಾಡಿದ ಬೊಮ್ಮಾಯಿ, ಪಕ್ಷದ ಗೆಲ್ಲುವ ಅಭ್ಯರ್ಥಿಗಳಿಗಾಗಿ ತೀವ್ರ ಪೈಪೋಟಿ ಇದೆ. ಈ ಪರಿಸ್ಥಿತಿಯನ್ನು ಹೈಕಮಾಂಡ್ ಸಮರ್ಥವಾಗಿ ನಿಭಾಯಿಸಲಿದೆ. ಹೈಕಮಾಂಡ್ ಟಿಕೆಟ್ ನೀಡಿದ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಅಸ್ಸಾಂ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಆ ಪಕ್ಷ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್ ಕೆಲಸಕ್ಕೆ ಬರುವುದಿಲ್ಲ. ಜನರನ್ನು ಮೋಸ ಮಾಡಲು ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತಿದೆ. ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶುದ್ಧೀಕರಿಸಲು ಎಂಇಎಸ್ ಮುಂದಾಗಿರುವ ಕುರಿತು ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com