ನಗರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಮುಂದು!
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಬೂತ್‌ಗಳಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವತ್ತ ಚುನಾವಣಾ ಆಯೋಗ ವಿಶೇಷ ಗಮನ ಹರಿಸಿದೆ.
Published: 22nd March 2023 12:29 PM | Last Updated: 22nd March 2023 12:29 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಬೂತ್‌ಗಳಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವತ್ತ ಚುನಾವಣಾ ಆಯೋಗ ವಿಶೇಷ ಗಮನ ಹರಿಸಿದೆ.
ರಾಜ್ಯವು 57,300 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳಗಳು ಕಂಡು ಬಂದಿದ್ದರೂ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಕಡಿಮೆಯಿರುವುದು ಕಂಡು ಬಂದಿದೆ.
ಕಳೆದ ಒಂದು ದಶಕದಲ್ಲಿ, ರಾಜ್ಯದ ಮತದಾನದ ಶೇಕಡಾವಾರು 70 ಕ್ಕಿಂತ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಇದರ ಪ್ರಮಾಣ ಶೇಕಡಾ 50ಕ್ಕಿಂತ ಕಡಿಮೆಯಿರುವುದು ಕಂಡು ಬಂದಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, ರಾಜ್ಯದಲ್ಲಿರುವ ಒಟ್ಟಾರೆ ಮತಗಟ್ಟೆಗಳ ಪೈಕಿ 9,000 ಮತಗಟ್ಟೆಗಳಲ್ಲಿ ಕಡಿಮೆ ಮತದಾನ ನಡೆಯುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ 73 ವಿಧಾನಸಭಾ ಕ್ಷೇತ್ರಗಳನ್ನು ಗುರ್ತಿಸಲಾಗಿದ್ದು, ಈ ಕ್ಷೇತ್ರಗಳಿಗೆ ನಮ್ಮ ತಂಡ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ, ಆ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾಕಷ್ಜು ಜನರು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂತಹವರಿಗೆ ವೋಟರ್ ಸ್ಲಿಪ್ ಗಳ ತಲುಪಿಸುವುದು ಸವಾಲಿನ ಕೆಲಸವಾಗಿದೆ. ಮತದಾರರು ಮತಗಟ್ಟೆಗಳಿಗೆ ಬರದೇ ಇರಲು ಇದೂ ಒಂದು ಕಾರಣವಾಗಿರಬಹುದು. ಈ ಬಾರಿ, ನಾವು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಅಥವಾ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸಹಾಯದಿಂದ ಇಂತಹ ಜನರನ್ನು ತಲುಪಲು ಚಿಂತನೆ ನಡೆಸಿದ್ದೇವೆ. 100 ರಷ್ಟು ಮತದಾರರಿಗೆ ವೋಟರ್ ಸ್ಲಿಪ್ ಗಳ ತಲುಪಿಸಲು ಮುಂದಾಗಿದ್ದೇವೆ. ಈ ಬಾರಿ ಹೆಚ್ಚಿನ ಮತದಾರರನ್ನು ಸೆಳೆಯುವ ಭರವಸೆ ಇದೆ ಎಂದು ತಿಳಿಸಿದ್ದಾರೆ.