ರಾಮನಗರ: ಸಂಕೀಘಟ್ಟದಲ್ಲಿ ದೇಶಕ್ಕೆ ಮಾದರಿಯಾದ ಡಿಜಿಟಲ್ ಹೆಲ್ತ್ ಕ್ಲಿನಿಕ್ ಆರಂಭ
ಇಡೀ ದೇಶಕ್ಕೇ ಮಾದರಿ ಎನ್ನಬಹುದಾದ 12 ಕೋಟಿ ರೂ. ವೆಚ್ಚದಲ್ಲಿ ಮಾಗಡಿ ತಾಲೂಕಿನ ಸಂಕೀಘಟ್ಟ ಗ್ರಾಮದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಮತ್ತು ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಶುಕ್ರವಾರ ಲೋಕಾರ್ಪಣೆ ಮಾಡಿದರು.
Published: 24th March 2023 05:59 PM | Last Updated: 24th March 2023 07:10 PM | A+A A-

ಆಸ್ಪತ್ರೆ ಲೋಕಾರ್ಪಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ ಮಂಜುನಾಥ್ ಮತ್ತಿತರರು
ರಾಮನಗರ: ಇಡೀ ದೇಶಕ್ಕೇ ಮಾದರಿ ಎನ್ನಬಹುದಾದ 12 ಕೋಟಿ ರೂ. ವೆಚ್ಚದಲ್ಲಿ ಮಾಗಡಿ ತಾಲೂಕಿನ ಸಂಕೀಘಟ್ಟ ಗ್ರಾಮದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಮತ್ತು ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಶುಕ್ರವಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ವರ್ಚುಯಲ್ ಸ್ಮಾರ್ಟ್ ಕ್ಲಿನಿಕ್ ವ್ಯವಸ್ಥೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜ್ಯದಲ್ಲಿ ಎಲ್ಲೂ ಇಲ್ಲ. ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯು ಈ ಆಸ್ಪತ್ರೆಗೆ 9.50 ಕೋಟಿ ರೂ. ನೀಡಿದೆ. ಜೊತೆಗೆ ಆರ್ ವಿ ಶಿಕ್ಷಣ ಸಂಸ್ಥೆಗಳ ಸಮೂಹ ಮತ್ತು ಯುನೈಟೆಡ್ ವೇ ಸಂಸ್ಥೆಗಳ ಮೂಲಕ 3 ಕೋಟಿ ರೂ. ಮೌಲ್ಯಕ್ಕೂ ಹೆಚ್ಚಿನ ಸಾಧನ ಸಲಕರಣೆಗಳು ಹಾಗೂ ಇ-ಆಸ್ಪತ್ರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಗ್ರಾಮೀಣ ಜನರಿಗೆ ಅವರಿದ್ದಲ್ಲಿಯೇ ಅತ್ಯುತ್ತಮ ಚಿಕಿತ್ಸೆಗಳು ಉಚಿತವಾಗಿ ಸಿಗಬೇಕು ಎನ್ನುವುದು ಬಿಜೆಪಿ ಸರಕಾರದ ಸಂಕಲ್ಪವಾಗಿದೆ. ಹೀಗಾಗಿ ಇಲ್ಲಿ 24/7 ಕಾರ್ಯ ನಿರ್ವಹಿಸುವ ಹೆರಿಗೆ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ದಂತ ಪರೀಕ್ಷೆ, ಎಕ್ಸ್‌ರೇ ಸೌಲಭ್ಯ, ತುರ್ತು ಚಿಕಿತ್ಸಾ ಘಟಕ ಎಲ್ಲವೂ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ ಜನರು ಅತ್ಯಂತ ಸುಲಭವಾಗಿ ಇವುಗಳ ಲಾಭ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಡಾ. ಪುನೀತ್‌ರಾಜ್‌ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ
ತಜ್ಞ ವೈದ್ಯರು ಮತ್ತು ರೋಗಿಗಳ ನಡುವೆ ನೇರ ಸಂಪರ್ಕ ಇಲ್ಲದಿದ್ದರೂ ಆನ್‌ಲೈನ್ ಮೂಲಕ ಇದು ಕಾರ್ಯ ನಿರ್ವಹಿಸಲಿದ್ದು, ಇದನ್ನು ಬೆಂಗಳೂರಿನಲ್ಲಿರುವ ಕಮಾಂಡ್ ಸೆಂಟರ್ ಜೊತೆಗೆ ಬೆಸೆಯಲಾಗಿದೆ. ಇದರಡಿಯಲ್ಲಿ ಹೃದಯ, ಚರ್ಮ, ಮಾನಸಿಕ ಆರೋಗ್ಯ, ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಯೋಜನೆ ಇಲ್ಲಿ ಯಶಸ್ವಿಯಾದರೆ ಜಿಲ್ಲೆಯ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಂಕೀಘಟ್ಟದಲ್ಲಿ ವಿನೂತನವಾಗಿ ಸ್ಥಾಪಿಸಿರುವ ಡಿಜಿಟಲ್ ಹೆಲ್ತ್ ಕ್ಲಿನಿಕ್ (ಮಲ್ಲೇಶ್ವರ ಮಾದರಿಯಲ್ಲಿ) ಉದ್ಘಾಟಿಸಲಾಯಿತು.
— Dr. Ashwathnarayan C. N. (@drashwathcn) March 24, 2023
ಗ್ರಾಮೀಣ ಪ್ರದೇಶದ ಜನತೆಗೆ ಉಚಿತವಾಗಿ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಲಭ್ಯವಾಗಿಸಲು ಸಾಧ್ಯ ಎಂಬುದಕ್ಕೆ ಈ ಆರೋಗ್ಯ ಕೇಂದ್ರ ದೇಶಕ್ಕೇ ಮಾದರಿಯಾಗಿದೆ.#ರಾಮನನಗರ_ರಾಮನಗರ pic.twitter.com/4h52LvxFbv
ಆಸ್ಪತ್ರೆಯ ಆವರಣದಲ್ಲೇ ಮಕ್ಕಳ ವಾರ್ಡ್, ಜಿಮ್ ಮತ್ತು ಫಿಸಿಯೋಥೆರಪಿ ವ್ಯವಸ್ಥೆ ಲಭ್ಯವಿದ್ದು, ಆಸ್ಪತ್ರೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಎಕ್ಸ್‌ರೇ ಯಂತ್ರಗಳಿಗೆ ಫ್ಯಾಕ್ಸ್ ಸೌಲಭ್ಯ ಅಳವಡಿಸಿದ್ದು, ರೋಗಿಗಳಿಗೆ ಸಂಬಂಧಿಸಿದ ವರದಿಯನ್ನು ಅರೆಕ್ಷಣದಲ್ಲಿ ರವಾನಿಸಿ, ವಿಶ್ಲೇಷಿಸಬಹುದು. ಇಲ್ಲಿನ ಪ್ರಯೋಗಾಲಯದಲ್ಲಿ 250 ಬಗೆಯ ಪರೀಕ್ಷೆಗಳನ್ನು ನಡೆಸುವಂತಹ ವ್ಯವಸ್ಥೆ ಇದೆ. ಜತೆಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಿಜಿಟಲ್ ಎಕ್ಸ್‌ರೇ, ಸ್ಕ್ಯಾನರ್ ಮತ್ತು ಏರ್‍ಕಂಪ್ರೆಸರ್ ಸೌಲಭ್ಯಗಳೂ ಇವೆ ಎಂದು ಅವರು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಪುರುಷರು ಕೂಡ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸುವುದಿಲ್ಲ. ಇತ್ತೀಚೆಗೆ ಪುರುಷರಲ್ಲೂ ವೃಷಣಗಳ ಕ್ಯಾನ್ಸರ್, ಬಂಜೆತನ ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದನ್ನು ಪರಿಗಣಿಸಿ ಇಲ್ಲಿ ಪುರುಷರಿಗೆಂದೇ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು. ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.