ಬೆಂಗಳೂರು: ನಕಲಿ ದಾಖಲ ಸೃಷ್ಟಿಸಿ 6 ಎಸ್‌ಯುವಿ ಕಾರು ಖರೀದಿಗೆ ಸಾಲ ಪಡೆದ ವಂಚಕರ ಬಂಧನ

ಆರು ಎಸ್‌ಯುವಿಗಳನ್ನು ಖರೀದಿಸಲು ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದು, ಬಳಿಕ ಕಾರುಗಳನ್ನು ಮಾರಾಟ ಮಾಡಿದ್ದ ಆರೋಪಿ ಸೇರಿದಂತೆ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆರು ಎಸ್‌ಯುವಿಗಳನ್ನು ಖರೀದಿಸಲು ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದು, ಬಳಿಕ ಕಾರುಗಳನ್ನು ಮಾರಾಟ ಮಾಡಿದ್ದ ಆರೋಪಿ ಸೇರಿದಂತೆ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಹಲಸೂರಿನ ಜೋಗುಪಾಳ್ಯ ನಿವಾಸಿ ಆರ್ ಪ್ರದೀಪ್ ಕುಮಾರ್(38) ಮತ್ತು ಎಚ್‌ಬಿಆರ್ ಲೇಔಟ್‌ನ ಯಾಸಿನ್ ನಗರದ ಮನ್ಸೂರ್ ಮಿರ್ಜಾ(38) ಎಂದು ಗುರುತಿಸಲಾಗಿದೆ.

2018ರಲ್ಲಿ ಮೈಕೋ ಲೇಔಟ್‌ನಲ್ಲಿ ಫೈನಾನ್ಸ್ ಸಂಸ್ಥೆಯನ್ನು ಸಂಪರ್ಕಿಸಿದ ಕುಮಾರ್, ಟ್ರಾನ್ಸ್‌ಪೋರ್ಟ್ ಸೊಲ್ಯೂಷನ್ಸ್ ಸಂಸ್ಥೆಯನ್ನು ನಡೆಸುವುದಾಗಿ ಹೇಳಿಕೊಂಡು ಆರು ಎಸ್‌ಯುವಿಗಳನ್ನು ಖರೀದಿಸಲು ಸಾಲ ಪಡೆದಿದ್ದರು ಮತ್ತು ಇದಕ್ಕಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ವಂಚಕರು ನೀಡಿದ್ದ ದಾಖಲೆಗಳನ್ನು ನಂಬಿ ಸಂಸ್ಥೆಯು ಸಾಲವನ್ನು ಮಂಜೂರು ಮಾಡಿತ್ತು. ಸಾಲ ಪಡೆದು ವಾಹನ ಖರೀದಿಸಿದ್ದ ಆರೋಪಿಯು ಸಾಲದ ಕಂತು ಪಾವತಿಸಿಲ್ಲ. ಮೂರು ತಿಂಗಳ ಬಳಿಕ ಫೈನಾನ್ಸ್‌ನ ಸಿಬ್ಬಂದಿ ಈತನ ಕಚೇರಿ ವಿಳಾಸಕ್ಕೆ ತೆರಳಿದಾಗ ಅಲ್ಲಿ ಯಾವುದೇ ಕಂಪನಿ ಇರಲಿಲ್ಲ. ಮನೆಯ ವಿಳಾಸಕ್ಕೆ ಭೇಟಿ ನೀಡಿದಾಗ ಆ ಹೆಸರಿನ ವ್ಯಕ್ತಿ ಇಲ್ಲದಿರುವುದು ಕಂಡು ಬಂದಿತ್ತು. ಬಳಿಕ ಫೈನಾನ್ಸ್‌ ಕಂಪನಿಯವರು ಆರೋಪಿಯ ವಿರುದ್ಧ ದೂರು ನೀಡಿ ಸುಮ್ಮನಾಗಿದ್ದರು.

ಎರಡು ವರ್ಷದ ಹಿಂದೆ ಎಲೆಕ್ಟ್ರಾನಿಕ್‌ ಸಿಟಿ ಆರ್‌ಟಿಒ ಕಚೇರಿಯಿಂದ ಫೈನಾನ್ಸ್‌ ಕಂಪನಿಯ ಮ್ಯಾನೇಜರ್‌ಗೆ ಕರೆ ಮಾಡಿ, ಹೈದರಾಬಾದ್‌ ಆರ್‌ಟಿಒ ಕಚೇರಿಯಿಂದ ಒಂದು ಮಹಿಂದ್ರಾ ಕ್ಸೈಲೋ ಕಾರು ವರ್ಗಾವಣೆಗೆ ಮನವಿ ಬಂದಿದೆ. ಮನವಿಯಲ್ಲಿ ಫೈನಾನ್ಸ್‌ ಸಾಲ ತೀರಿಸಿರುವುದಾಗಿ ದಾಖಲಾತಿಗಳು ಹಾಗೂ ಮಾರಾಟಕ್ಕೆ ಎನ್‌ಒಸಿ ನೀಡಿದ್ದಾರೆ. ಈ ದಾಖಲೆಗಳು ಅನುಮಾನಾಸ್ಪದವಾಗಿದ್ದು, ಒಮ್ಮೆ ಪರಿಶೀಲಿಸುವಂತೆ ಹೇಳಿದ್ದಾರೆ. ಅದರಂತೆ ಮ್ಯಾನೇಜರ್‌ ಆರ್‌ಟಿಒ ಕಚೇರಿಗೆ ತೆರಳಿ ದಾಖಲೆಗಳನ್ನು ಪರೀಲಿಸಿದಾಗ ಅವು ನಕಲಿ ದಾಖಲೆಗಳು ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಆರೋಪಿಗಳಿಂದ 80 ಲಕ್ಷ ರೂ. ಮೌಲ್ಯದ ಏಳು ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com