

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹಾಡಹಗಲೇ ಗ್ಯಾಂಗ್ ವಾರ್ ನಡೆದಿದ್ದು, ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಚಂದ್ರಶೇಖರ್ ಅಲಿಯಾಸ್ ಚೆಂದು ಎಂಬಾತನನ್ನು ಕೊಲೆಗೈಯ್ಯಲಾಗಿದೆ.
ಮೈಸೂರಿನ ರೌಡಿ ಶೀಟರ್ ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಎಂಬಾತನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ರೌಡಿಶೀಟರ್ ಚಂದು, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಹದೇಶ್ ಅಲಿಯಾಸ್ ಅವ್ವ ಮಾದೇಶ್ ಅವರ ಆಪ್ತನಾಗಿದ್ದ ಎಂದು ಹೇಳಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ರೌಡಿಶೀಟರ್ ಚಂದು ಹುಣಸೂರು ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ಕೆಲ ದಿನಗಳಿಂದಷ್ಟೇ ಕೇಸ್ ಖುಲಾಸೆಯಾಗಿ ಜೈಲಿನಿಂದ ಹೊರಗೆ ಬಂದಿದ್ದ. ಪಡುವಾರಹಳ್ಳಿಯ ದೇವು ಕೊಲೆಗೆ ಪ್ರತಿಕಾರ ತೀರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Advertisement