ನೋಟರಿ ವಕೀಲರ ನೇಮಕಕ್ಕೆ ಲಂಚ ಆರೋಪ: ಕೇಂದ್ರ ಸರ್ಕಾರದ ಹೆಚ್ಚುವರಿ ಕಾನೂನು ಸಲಹೆಗಾರ ಸೇರಿ ಇಬ್ಬರ ಬಂಧನ

ನೋಟರಿ ವಕೀಲರನ್ನು ನೇಮಕ ಮಾಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರದ ವಿಭಾಗದ ಹೆಚ್ಚುವರಿ ಕಾನೂನು ಸಲಹೆಗಾರ ಟಿ.ಕೆ. ಮಲಿಕ್ ಅವರನ್ನು ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನೋಟರಿ ವಕೀಲರನ್ನು ನೇಮಕ ಮಾಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರದ ವಿಭಾಗದ ಹೆಚ್ಚುವರಿ ಕಾನೂನು ಸಲಹೆಗಾರ ಟಿ.ಕೆ. ಮಲಿಕ್ ಅವರನ್ನು ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ನೋಟರಿ ವಕೀಲರನ್ನು ನೇಮಕ ಮಾಡಲು 50 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ 25,000 ರೂ ಪಡೆಯುತ್ತಿದ್ದ ಆರೋಪದಡಿ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರದ ವಿಭಾಗದ ಹೆಚ್ಚುವರಿ ಕಾನೂನು ಸಲಹೆಗಾರ ಟಿ.ಕೆ. ಮಲಿಕ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ‘ಕೇಂದ್ರ ಸರ್ಕಾರದ ನೋಟರಿ ನೇಮಕ ಮಾಡುವ ಜವಾಬ್ದಾರಿಯನ್ನು ಕಾನೂನು ವ್ಯವಹಾರ ವಿಭಾಗಕ್ಕೆ ನೀಡಲಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುವ ಮಲಿಕ್, ಅಧಿಕಾರ ದುರುಪಯೋಗಪಡಿಸಿಕೊಂಡು ಲಂಚ ಪಡೆದು ನೋಟರಿ ನೀಡುತ್ತಿದ್ದ. ಇದಕ್ಕೆ ಸಹಕರಿಸುತ್ತಿದ್ದ ಬೆಂಗಳೂರಿನ ವಕೀಲರಾದ ಜಿ.ಕೆ. ವಾಣಿ ಎಂಬುವವರನ್ನೂ ಬಂಧಿಸಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಬಿಐ ಮೂಲಗಳು ಹೇಳಿವೆ.

25,000 ರೂ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಅಧಿಕಾರಿಗಳು ಮಲಿಕ್‌ನನ್ನು ಬಂಧಿಸಲಾಗಿದೆ. ಇದೇ ವೇಳೆ ಆತನ ಬಳಿ 4.32 ಲಕ್ಷ ರೂ ನಗದು ಸಿಕ್ಕಿದ್ದು, ಅದು ಸಹ ಲಂಚದ ಹಣ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಬೆಂಗಳೂರು ಹಾಗೂ ಗಾಜಿಯಾದಾಬ್‌ನಲ್ಲಿರುವ ಆರೋಪಿಗೆ ಸೇರಿದ್ದ ಎರಡು ಸ್ಥಳಗಳ ಮೇಲೂ ದಾಳಿ ಮಾಡಿ, ಸುಮಾರು 34 ಲಕ್ಷ ರೂ ಜಪ್ತಿ ಮಾಡಲಾಗಿದೆ. ಆರೋಪಿ ನೀಡಿದ್ದ ಮಾಹಿತಿಯಂತೆ ಬೆಂಗಳೂರಿನಲ್ಲಿ ವಾಣಿ ಎಂಬುವವರನ್ನು ಬಂಧಿಸಲಾಗಿದೆ.’ ಎಂದು ಮೂಲಗಳು ತಿಳಿಸಿವೆ.

‘ಮಹತ್ವದ ಪ್ರಕರಣಗಳಲ್ಲಿ ಎದುರಾಳಿ ವಕೀಲರ ಜೊತೆಗೂ ಮಲಿಕ್ ಒಡನಾಟವಿಟ್ಟುಕೊಂಡು, ಪ್ರಕರಣ ಗೆಲ್ಲಲು ಸಹಕಾರ ನೀಡುತ್ತಿದ್ದ ಬಗ್ಗೆ ಮಾಹಿತಿ ಇದೆ. ದೇಶದ ಹಲವು ರಾಜ್ಯಗಳ ವಕೀಲರಿಗೆ ಅಕ್ರಮವಾಗಿ ನೋಟರಿ ನೀಡಿರುವ ಸಂಶಯವೂ ಇದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com